ಜನಸಾಮಾನ್ಯರ ಬದುಕಿಗೆ ಪೆಟ್ಟು

tth (10)
ರಾಜ್ಯ ಸರ್ಕಾರದ ದರ ಏರಿಕೆ ನೀತಿಯನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಹೆದ್ದೂರು ನವೀನ್, ಸತೀಶ್, ಪ್ರಶಾಂತ್, ಕವಿರಾಜ್ ಇತರರಿದ್ದರು.
Published on

ತೀರ್ಥಹಳ್ಳಿ: ರಾಜ್ಯ ಸರ್ಕಾರ ದಿನೇದಿನೇ ಹೊಸ ತೆರಿಗೆಗಳನ್ನು ಹೇರುವ ಮೂಲಕ ಮಧ್ಯಮ ವರ್ಗದ ಜನರ ಬದುಕಿಗೆ ಕೊಡಲಿ ಪೆಟ್ಟು ನೀಡಿದೆ. ದರ ಏರಿಕೆ ನೀತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಮಂಡಲ ಬಿಜೆಪಿ ಕಾರ್ಯಕರ್ತರು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ತೆರಿಗೆ ಹೆಚ್ಚಿಸಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಲೇ ಬಜೆಟ್ ನಂತರದಲ್ಲಿ ಹಾಲು, ವಿದ್ಯುತ್, ಬಸ್ ಪ್ರಯಾಣ ದರ, ಸ್ಟಾೃಂಪ್ ಶುಲ್ಕ ಮತ್ತು ಮದ್ಯ ದರ ಏರಿಕೆಯಿಂದ ಜನರ ಮೇಲೆ ಹೊರೆ ಬಿದ್ದಿದೆ. ಡೀಸೆಲ್ ದರ ಏರಿಸಿದ ಪರಿಣಾಮ ದಿನಬಳಕೆ ವಸ್ತುಗಳು ಹಾಗೂ ಸರಕು ಸಾಮಗ್ರಿಗಳ ದರವೂ ಏರಿಕೆಯಾಗಿದೆ ಎಂದು ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ನೀಡಲು ಅವಕಾಶ ಇಲ್ಲವಾದರೂ ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಿದೆ. ವಿದೇಶಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ಆರ್ಥಿಕ ನೆರವು ಮತ್ತು ಆ ಸಮುದಾಯದ ಹೆಣ್ಣು ಮಕ್ಕಳ ಆತ್ಮರಕ್ಷಣೆ ಕಲೆ ತರಬೇತಿ ಪಡೆಯಲು ಮುಂಗಡ ಪತ್ರತದಲ್ಲಿ ಹಣ ಮೀಸಲಿಟ್ಟಿರುವುದು ಖಂಡನೀಯ ಎಂದರು.

18 ಮಂದಿ ಶಾಸಕರನ್ನು ಅಮಾನತು ಮಾಡಿದ ವಿಧಾನಸಭೆ ಸ್ಪೀಕರ್ ವಿರುದ್ಧ ಹರಿಹಾಯ್ದ ಜ್ಞಾನೇಂದ್ರ, ಅತ್ಯಂತ ಸಜ್ಜನರು ನಿರ್ವಹಿಸಿದ್ದ ಸಭಾಧ್ಯಕ್ಷ ಸ್ಥಾನವನ್ನು ಹಾಲಿ ಸ್ಪೀಕರ್ ಯು.ಟಿ.ಖಾದರ್ ಅಪವಿತ್ರಗೊಳಿಸಿದ್ದಾರೆ. ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವ ಅವರು ಈವರೆಗೂ ಪಕ್ಷಕ್ಕೆ ರಾಜೀನಾಮೆ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಪ್ರಮುಖರಾದ ಸತೀಶ್, ಪ್ರಶಾಂತ್ ಕುಕ್ಕೆ, ಕವಿರಾಜ್, ಸೋಮಶೇಖರ್, ಸಂತೋಷ್ ದೇವಾಡಿಗ, ಪ್ರಸಾದ್ ಶೆಟ್ಟಿ, ಕೆ.ಶ್ರೀನಿವಾಸ್, ರಕ್ಷಿತ್, ರವೀಶ್ ಭಟ್, ಯಶಸ್ವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net