ಆಲೋಚನೆಗಳ ಮೇಲೆ ಜಾಗತೀಕರಣದ ಪ್ರಭಾವ

tth tunga
ತುಂಗಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಉದ್ಘಾಟಿಸಿದರು. ಡಾ. ಆರ್.ಕುಮಾರಸ್ವಾಮಿ, ಪಿ.ವಿ.ಮಹಾಬಲೇಶ್, ಎಂ.ಎನ್.ರಮೇಶ್, ಡಾನ್ ರಾಮಣ್ಣ ಶೆಟ್ಟಿ ಇತರರಿದ್ದರು.
Published on

ತೀರ್ಥಹಳ್ಳಿ: ಜಾಗತೀಕರಣದ ಪ್ರಭಾವದಿಂದಾಗಿ ಆಧುನಿಕ ಜಗತ್ತು ಕನ್ನಡಿಗರಾದ ನಮ್ಮ ಕಣ್ಣಿನ ರೆಪ್ಪೆಯನ್ನೇ ಮುಚ್ಚಿ ಆಲೋಚನಾ ಕ್ರಮವನ್ನೇ ಬದಲಾಯಿಸಿದೆ. ನಮ್ಮನ್ನು ನಾವು ಅರಿತುಕೊಳ್ಳದಿದ್ದರೆ ಕನ್ನಡಿಗರಾದ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.

ತುಂಗಾ ಮಹಾವಿದ್ಯಾಲಯದ ರಜತ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್ ರೇಂಜರ್ಸ್‌ ಮತ್ತು ರೋವರ್ಸ್‌ ಹಾಗೂ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಮುಂತಾದ ಚಟುವಟಿಕೆಗಳು ಪಠ್ಯದಷ್ಟೇ ಪ್ರಮುಖ. ವಿದ್ಯಾರ್ಥಿಗಳು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ದಾಸರಾದರೆ ಭವಿಷ್ಯ ಕರಾಳವಾಗಲಿದೆ ಎಂದು ಎಚ್ಚರಿಸಿದರು.

ಕನ್ನಡನಾಡು ಶ್ರಮಿಕ ವರ್ಗದವರಿಂದ ಕಟ್ಟಲ್ಪಟ್ಟಿದೆಯೇ ಹೊರತು ರಾಜಮಹಾರಾಜರು, ಋಷಿ ಮುನಿಗಳು, ಯಾವುದೇ ವಿದ್ವಾಂಸ ಅಥವಾ ಸಾಹಿತಿಗಳಿಂದಾಗಲಿ ಅಲ್ಲ. ಇವೆಲ್ಲ ಕಟ್ಟು ಕಥೆಗಳು. ಕನ್ನಡದ ಈ ನೆಲ ಸ್ವಾಭಿಮಾನದ ಸಂಕೇತ. ಕನ್ನಡದ ಅಸ್ಮಿತೆಗೆ ಮೋಸ ಮಾಡಿ ದುಡಿಯುವಂತೆ ಜಾಗತೀಕರಣ ಪ್ರೇರೇಪಿಸುತ್ತಿದೆ. ಇಂದಿನ ನಮ್ಮ ಶಿಕ್ಷಣ ಸಹ ಇದೇ ಹಾದಿಯಲ್ಲಿ ಸಾಗುತ್ತಿದೆ. ಕನ್ನಡಿಗರಾದ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಈ ಪ್ರದೇಶದ ಗಿಡ, ಮರ, ಬಳ್ಳಿಗಳು ಮಾತ್ರವಲ್ಲದೆ ಪ್ರತಿಷ್ಠಿತವಾದ ಈ ಕಾಲೇಜಿನ ಗ್ರಂಥಾಲಯದಲ್ಲಿರುವ ಪುಸ್ತಕದ ಹಾಳೆಗಳಿಗೂ ಈ ನೆಲದ ಮಹಾನ್ ವ್ಯಕ್ತಿಗಳಾದ ಕುವೆಂಪು, ಅನಂತಮೂರ್ತಿ, ಎಂ.ಕೆ.ಇಂದಿರಾ ಮುಂತಾದವರ ಹಸ್ತ ಸ್ಪರ್ಶವಾಗಿದೆ. ಇಂತಹ ನೆಲದಲ್ಲಿ ವ್ಯಾಸಂಗ ಮಾಡುತ್ತಿರುವ ನೀವು ಅದೃಷ್ಟವಂತರು. ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲದ ಪ್ರತಿನಿಧಿಗಳಾಗಿ ಹೊಣೆಗಾರಿಕೆಯಿಂದ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಪಾಲಕರಿಗೆ ದ್ರೋಹ ಬಗೆಯದೇ ನಿಷ್ಠರಾಗಿರಿ ಎಂದೂ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಆರ್.ಕುಮಾರಸ್ವಾಮಿ, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಿ.ವಿ.ಮಹಾಬಲೇಶ್, ಉಪಾಧ್ಯಕ್ಷ ಎಂ.ಎನ್.ರಮೇಶ್, ಕಾರ್ಯದರ್ಶಿ ಡಾನ್ ರಾಮಣ್ಣ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್, ಐಕ್ಯೂಎಸಿ ಮುಖ್ಯಸ್ಥ ಡಾ. ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net