

ಚಿಕ್ಕಬಳ್ಳಾಪುರ: ಪಾಲಕರ ಅಸಡ್ಡೆ ಹಾಗೂ ನಾನಾ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ.
ಕಳೆದ ನಾಲ್ಕು ತಿಂಗಳಲ್ಲಿ ೪೧ ದೂರುಗಳನ್ನು ಸ್ವೀಕರಿಸಿದ್ದು ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯಾಚರಣೆಯಿಂದ ೩೨ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ೯ ಕಡೆ ನಿಯಮ ಉಲ್ಲಂಘಿಸಿ, ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಂಧ್ರದ ಗಡಿಯಲ್ಲಿರುವ ಈ ಭಾಗದಲ್ಲಿ ಬಾಲ್ಯ ವಿವಾಹ ಮಾಡಿಸುವಂತಹುದು ನಿರಂತರವಾಗಿ ನಡೆಯುತ್ತಿದೆ. ಕದ್ದು ಮುಚ್ಚಿ ಹೊರ ರಾಜ್ಯಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಸಿ ಕರೆದುಕೊಂಡು ಬರುವಂತಹ ಚಾಳಿಯು ನಿಂತಿಲ್ಲ. ವಿವಿಧ ಇಲಾಖೆಗಳ ಜಾಗೃತಿ ಕಾರ್ಯಕ್ರಮಗಳು, ಅಧಿಕಾರಿಗಳ ಕಾರ್ಯಾಚರಣೆ ಹಾಗೂ ಕಠಿಣ ಕಾಯ್ದೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಲಾಗುತ್ತಿದೆ. ಇದಕ್ಕೆ ಬಹುತೇಕ ಮಧ್ಯೆವರ್ತಿಗಳ ಪುಸಲಾಯಿಸುವಿಕೆಯು ಪ್ರಮುಖ ಕಾರಣ ಎಂದೇಳಲಾಗುತ್ತಿದೆ.
ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ ತಾಲೂಕುಗಳು ಆಂಧ್ರ ಭಾಗಕ್ಕೆ ಹೊಂದಿಕೊಂಡಿದೆ. ಇಲ್ಲಿ ಕಾಲ ಕಾಲಕ್ಕೆ ಪ್ರಕರಣಗಳ ಪತ್ತೆಯಾಗುತ್ತಿವೆ. ಸ್ಥಳೀಯರು ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಬರುತ್ತಿದ್ದಂತೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ತಡೆಯುತ್ತಿದ್ದಾರೆ.
*ಕಾವಲು ಪಡೆ ಬಲವರ್ಧನೆ
ರಾಜ್ಯದಲ್ಲಿ ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿರುವುದನ್ನು ನಿಯಂತ್ರಿಸಲು ಗ್ರಾ.ಪಂ.ಮಟ್ಟದಲ್ಲಿ ಕಾವಲು ಪಡೆಯನ್ನು ರಚಿಸಲಾಗಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಸೇರಿದಂತೆ ಹಲವರು ಇರಲಿದ್ದು ಆಯಾ ವ್ಯಾಪ್ತಿಯಲ್ಲಿ ಏನಾದರೂ ಮಕ್ಕಳಿಗೆ ಮದುವೆ ಮಾಡಲು ಯತ್ನಿಸಿದರೆ ಇಲ್ಲವೇ ಯಾರಾದರೂ ದೌರ್ಜನ್ಯವೆಸಗಿದ್ದಲ್ಲಿ ತಕ್ಷಣ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತಾಗಲು ಹಲವು ಜವಾಬ್ದಾರಿ ವಹಿಸಲಾಗಿದೆ. ಇದರ ನಡುವೆಯೂ ಕಾನೂನು ನಿಯಮ ಉಲ್ಲಂಘನೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಬಲವರ್ಧನೆಗೆ ಮಕ್ಕಳ ರಕ್ಷಣಾ ಆಯೋಗವು, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯು ಮುಂದಾಗಿದೆ.