ವಿದೇಶಕ್ಕೆ ವಲಸೆ ಭಾರತ 2ನೇ ಸ್ಥಾನ

Migration
Published on

ನವದೆಹಲಿ: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ದೇಶಗಳಿಗೆ 2018ರಲ್ಲಿ ವಿವಿಧ ರಾಷ್ಟ್ರಗಳಿಂದ ವಲಸೆ ಹೋಗಿ ಪೌರತ್ವ ಪಡೆದವರ ಪ್ರಮಾಣದ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಮೊದಲನೇ ಸ್ಥಾನದಲಿದೆ. ರೊಮೇನಿಯಾ 3ನೇ ಸ್ಥಾನದಲ್ಲಿದೆ.

2018ರಲ್ಲಿ ಭಾರತದಿಂದ ವಲಸೆ ಹೋಗುವವರ ಪ್ರಮಾಣ ಶೇಕಡ 10 ಹೆಚ್ಚಳವಾಗಿ 3.30 ಲಕ್ಷಕ್ಕೆ ಏರಿಕೆಯಾಗಿದೆ. ಇದು ಒಇಸಿಡಿ ದೇಶಗಳ ಒಟ್ಟಾರೆ ವಲಸೆಯಲ್ಲಿ ಶೇಕಡ 5ರಷ್ಟಿದೆ. ಹೆಚ್ಚು ವಲಸಿಗರು ಹೋಗಿರುವ ರಾಷ್ಟ್ರಗಳಲ್ಲಿ ಅಮೆರಿಕ, ಕೆನಡಾ, ಇಟಲಿ ಮತ್ತು ಬ್ರಿಟನ್ ಮುಂಚೂಣಿಯಲ್ಲಿವೆ. ಒಇಸಿಡಿ ದೇಶಗಳ ಒಟ್ಟು ವಲಸಿಗರ ಪ್ರಮಾಣ ಸುಮಾರು 66 ಲಕ್ಷವಿದ್ದು, 2017ಕ್ಕೆ ಹೋಲಿಸಿದರೆ ಇದು ಶೇಕಡ 3.8ರಷ್ಟು ಏರಿಕೆ ಕಂಡಿದೆ ಎಂದು ಒಇಸಿಡಿ ವರದಿಯಲ್ಲಿ ತಿಳಿಸಲಾಗಿದೆ.

ಒಇಸಿಡಿ ರಾಷ್ಟ್ರಗಳು ಉತ್ತಮವಾಗಿ ಅಭಿವೃದ್ಧಿ ಹೊಂದಿದ ಆರ್ಥಿಕತೆ ಹೊಂದಿರುವುದರಿಂದ ಅವು ವಲಸಿಗರ ಹೆಚ್ಚಿನ ಪಾಲನ್ನು ಆಕರ್ಷಿಸುತ್ತವೆ. ಉದ್ಯೋಗ, ಶಿಕ್ಷಣ, ಅಧ್ಯಯನ, ಆಶ್ರಯ ಸೇರಿದಂತೆ ಅನೇಕ ಕಾರಣಗಳಿಂದಾಗಿ ಜನರು ಈ ದೇಶಗಳಿಗೆ ವಲಸೆ ಹೋಗುತ್ತಾರೆ. ಕರೊನಾ ಬಿಕ್ಕಟ್ಟಿನಿಂದಾಗಿ ವಲಸೆಯ ಪ್ರಮಾಣದಲ್ಲಿ ಬದಲಾವಣೆಗಳಾಗಿವೆ ಎಂದು ಒಇಸಿಡಿಯ ಪ್ರಧಾನ ಕಾರ್ಯದರ್ಶಿ ಏಂಜಲ್ ಗುರ್ರಿಯಾ ಹೇಳಿದ್ದಾರೆ. ಬಹುತೇಕ ಎಲ್ಲಾ ದೇಶಗಳು ವಿದೇಶಿಯರಿಗೆ ಪ್ರವೇಶವನ್ನು ನಿರ್ಬಂಧಿಸಿವೆ. ಹೊಸ ವೀಸಾಗಳ ವಿತರಣೆ 2020ರ ಮೊದಲಾರ್ಧದಲ್ಲಿ ಶೇಕಡ 46ರಷ್ಟು ಕುಸಿತ ಕಂಡಿದೆ. ಇದು ಇದುವರೆಗೆ ದಾಖಲಾದ ಅತಿದೊಡ್ಡ ಕುಸಿತವಾಗಿದೆ ಎಂದಿದ್ದಾರೆ.

ಏನಿದು ಒಇಸಿಡಿ?

1960ರ ಡಿಸೆಂಬರ್ 14ರಂದು ಅಮೆರಿಕ ಆಸ್ಟ್ರೇಲಿಯಾ, ಬೆಲ್ಜಿಯಂ ಸೇರಿದಂತೆ 20 ರಾಷ್ಟ್ರಗಳು ಆರ್ಥಿಕ ಮಾರುಕಟ್ಟೆಯಲ್ಲಿ ಪರಸ್ಪರ ಸಹಭಾಗಿತ್ವ ಹೆಚ್ಚಿಸಲು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಯ ಸಂಸ್ಥೆ (ಒಇಸಿಡಿ) ರಚಿಸಿಕೊಂಡವು. ಬಳಿಕ ಇನ್ನೂ 17 ದೇಶಗಳು ಈ ಗುಂಪಿಗೆ ಸೇರ್ಪಡೆಯಾಗಿದ್ದು, ಸದ್ಯ 37 ದೇಶಗಳು ಒಇಸಿಡಿ ಗುಂಪಿನಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net