

ವಿರಾಜಪೇಟೆ: ವಿರಾಜಪೇಟೆ ಯ ಇತಿಹಾಸ ಪ್ರಸಿದ್ಧ ಶ್ರೀ ಗೌರಿ ಗಣೇಶೋತ್ಸವ ಮೂರ್ತಿಗಳ ವಿಸರ್ಜನೋತ್ಸವವು ಅದ್ದೂರಿಯಾಗಿ ಶನಿವಾರ ಜರುಗಿತು.
ಶ್ರೀ ಗಣೇಶ ಚತುರ್ಥಿಯಂದು ನಗರದಾದ್ಯಂತ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಮಾಡಲಾಗಿ ಹತ್ತು ದಿವಸಗಳವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು. ಶನಿವಾರ ಅನಂತ ಪದ್ಮನಾಭ ಚತುರ್ದಶಿಯಂದು ಶೋಭಯಾತ್ರೆಯ ಮೂಲಕ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ನಗರದಲ್ಲಿ ಒಟ್ಟು 22 ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಶನಿವಾರ ಸಂಜೆ 5 ಗಂಟೆಗೆ ನಗರದ ಮಹಾಗಣಪತಿ ದೇವಸ್ಥಾನದಿಂದ ಮೂರ್ನಾಡು ರಸ್ತೆಯಲ್ಲಿರುವ ಶ್ರೀ ನಾಗದೇವರಗುಡಿಯಲ್ಲಿ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಮೋದ್ ಅವರು ಪೂಜೆ ಹಾಗೂ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ರಾತ್ರಿ 9 ಘಂಟೆಗೆ ವಿರಾಜಪೇಟೆ ನಗರದ ಇತಿಹಾಸ ಪ್ರಸಿದ್ಧ ಶ್ರಿ ಮಹಾಗಣಪತಿ ದೇವಸ್ಥಾನದಲ್ಲಿ ಮೊದಲಿಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ವಿದ್ಯುತ್ ಹಾಗೂ ಹೂವಿನ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಗಡಿಯಾರ ಕಂಬದ ಸಮೀಪದಲ್ಲಿ ಸಿಡಿಮದ್ದು ಪ್ರದರ್ಶನ ಹಾಗೂ ಈಡುಗಾಯಿ ಸೇವೆಯನ್ನು ಸಲ್ಲಿಸಲಾಯಿತು. ತದನಂತರದಲ್ಲಿ ಬಸವೇಶ್ವರ ದೇವಸ್ಥಾನ, ಅಂಗಾಳ ಪರಮೇಶ್ವರಿ ದೇವಸ್ಥಾನ ಹಾಗೂ ಇತರ ಸಮಿತಿಗಳು ಪೂಜೆಯನ್ನು ಸಲ್ಲಿಸಿದ ಬಳಿಕ ತೇರಿನಲ್ಲಿ ಮೂರ್ತಿಗಳ ಪ್ರತಿಷ್ಠಾಪಿಸಿದರು. ವಿಸರ್ಜನೋತ್ಸವದ ಪ್ರಯುಕ್ತ ವಿವಿಧ ಸಮಿತಿಗಳು ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಆಯೋಜಿಸಿದ್ದವು. ವಿವಿಧ ಸಮಿತಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಮೊದಲು ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೆರವಣಿಗೆ ಉದ್ದಕ್ಕೂ ಸಿಡಿಮದ್ದನ್ನು ಸಿಡಿಸಿ ಸಂಭ್ರಮಿಸಲಾಯಿತು. ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಜಿಲ್ಲೆ ಹಾಗೂ ವಿವಿಧೆಡೆಗಳಿಂದ ಆಗಮಿಸಿದ 500ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್‌ನಲ್ಲಿ ಪಾಲ್ಗೊಂಡರು.