

ಯಲ್ಲಾಪುರ: ಇ-ಖಾತಾ ನೀಡಲು ಬಾಕಿ ಇರುವ ಆಸ್ತಿಗಳನ್ನು ಅಭಿಯಾನದ ಮೂಲಕ ಗುರುತಿಸಿ, ಆಸ್ತಿಗಳ ಮಾಲೀಕರು ಇ-ಖಾತೆ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಜಾಗೃತಿ ಮೂಡಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಕರೆದಿದ್ದ ಇ-ಖಾತಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪಪಂ ವ್ಯಾಪ್ತಿಯಲ್ಲಿ ನಾರಾಯಣಪುರ, ಸವಣಗೇರಿ, ಸಹಸ್ರಳ್ಳಿ, ಕಾಳಮ್ಮನಗರ ಭಾಗದ ಅನಧಿಕೃತ ನಿವೇಶನಗಳನ್ನು ಗುರುತಿಸಿ, ಗಾಂವಠಾಣಾ ಜಾಗವನ್ನು ತಕ್ಷಣ ಗುರುತಿಸುವ ಕೆಲಸ ತಹಸೀಲ್ದಾರ್ ಹಾಗೂ ಪಪಂ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ಎ -ಖಾತಾ ಹೆಸರಿನಲ್ಲಿ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಬಿ -ಖಾತಾ ಹೆಸರಿನಲ್ಲಿ ಲೇಔಟ್ ಅಕ್ರಮವನ್ನು ಸಕ್ರಮಗೊಳಿಸಲು ಸರ್ಕಾರ ಇದೊಂದು ಅವಕಾಶ ಮಾಡಿಕೊಟ್ಟಿದೆ. ಕಸದ ಗಾಡಿಯಲ್ಲಿ ಟ್ಯಾಕ್ಸ್ ತುಂಬಲು ಹೇಳುವ ಜೊತೆಗೆ ಇ -ಖಾತಾ, ಬಿ -ಖಾತಾ ಅಭಿಯಾನದ ಬಗ್ಗೆ ಮಾಹಿತಿ ಪ್ರಸಾರ ಮಾಡಬೇಕು. ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಬೇಕು. ಜನರಿಗೆ ಗೊಂದಲ ಇಲ್ಲದೇ ನ್ಯಾಯ ಸಿಗಬೇಕು ಎಂದರು.
ಸರ್ಕಾರದ ಇಲಾಖೆಗಳು, ಅರಣ್ಯ ಇಲಾಖೆಯ ಜಾಗದ ಅತಿಕ್ರಮಣಕ್ಕೆ ಇದು ಅನ್ವಯಿಸುವುದಿಲ್ಲ. ಎ ಖಾತಾ, ಬಿ ಖಾತಾದ ಕುರಿತಾಗಿ ಮಾಹಿತಿಯ ಕೊರತೆ ಅಧಿಕಾರಿಗಳಿಗೇ ಇರುವ ಹಿನ್ನೆಲೆಯಲ್ಲಿ ಅವರಿಗೆ ಶಾಸಕ ಹೆಬ್ಬಾರ ಪಾಠ ಮಾಡಿದರು. ಅನುಭವ, ಮಾಹಿತಿಯ ಕೊರತೆ ಇದ್ದಲ್ಲಿ ಅನುಭವಿಗಳಿಂದ ಮಾಹಿತಿ ಪಡೆದುಕೊಳ್ಳಲು ಸೂಚಿಸಿದರು. ತಾವು ಈ ವಿಷಯವಾಗಿ ಪದೇಪದೆ ಸಭೆ ಕರೆದು ಜನರಿಗೆ ನ್ಯಾಯ ಒದಗಿಸಲು ಬದ್ಧರಿರುವುದಾಗಿ ಶಾಸಕರು ಹೇಳಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ’ರಾಜ್ಯ ಸರ್ಕಾರ ಇ ಆಸ್ತಿ ತಂತ್ರಾಂಶದ ಮೂಲಕ ಇದ್ದವರಿಗೆ ಬಿ ಖಾತಾ ಕೊಡುವ ಐತಿಹಾಸಿಕ ನಿರ್ಣಯ ಸ್ವಾಗತಾರ್ಹ. ಇದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ಜನರಿಗೆ ಅನುಕೂಲ ಆಗಲಿದೆ. ಸಾಲ ಖಾತೆ ವಿಂಗಡಣೆ, ವಿದ್ಯುತ್ ಸೌಲಭ್ಯ ಇತ್ಯಾದಿ ಪಡೆಯಲು ಅನುಕೂಲ ಆಗಲಿದೆ. ಯಲ್ಲಾಪುರ ಕ್ಷೇತ್ರದಲ್ಲಿ 4 ಸಾವಿರ ಕುಟುಂಬಗಳಿಗೆ ನ್ಯಾಯ ಸಿಗಲಿದೆ.
ನಿಗದಿತ ಅವಧಿಯಲ್ಲಿ ಕೆಲಸ ಆಗಬೇಕು. ಅರ್ಜಿ ಕೊಟ್ಟವರಿಗೆ ಮೂರು ತಿಂಗಳೊಳಗೆ ಶಾಶ್ವತ ಪರಿಹಾರ ದೊರೆಯಬೇಕು. ಆನಂತರ ಬಿ ಖಾತಾದಲ್ಲಿ ಒಳಬರಲು ಅವಕಾಶವಿಲ್ಲ. ಪ್ರತಿ 15 ದಿನಕ್ಕೊಮ್ಮೆ ಪ್ರಗತಿ ಪರಿಶೀಲನೆ ಮಾಡುತ್ತೇನೆ ಎಂದರು.
ಪಪಂ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಸುನೀಲ ಗಾವಡೆ, ಗ್ರೇಡ್- 2 ತಹಸೀಲ್ದಾರ್ ಸಿ.ಜಿ. ನಾಯ್ಕ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.