ಸಂಪಾದಕೀಯ:ಐಎಂಎಫ್ ತಪ್ಪು ನಿರ್ಧಾರ

2-6820e13283bf9
Published on

ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತೆ 1 ಶತಕೋಟಿ ಡಾಲರ್ ಸಾಲವನ್ನು ಮಂಜೂರು ಮಾಡಿದೆ. ಇದರ ಜೊತೆಗೆ ಹವಾಮಾನ ಸಂಬಂಧಿ ಕಾರ್ಯಕ್ರಮಗಳಿಗಾಗಿ ಪಾಕಿಸ್ತಾನಕ್ಕೆ 1.4 ಶತಕೋಟಿ ಡಾಲರ್ ಹೊಸ ಸಾಲ ನೀಡುವುದಕ್ಕೂ ಐಎಂಎಫ್ ಅನುಮೋದನೆ ನೀಡಿದೆ.

ಸುಮಾರು ಏಳು ಶತಕೋಟಿ ವಿಸ್ತರಿತ ಸಾಲಕ್ಕಾಗಿ ಕೋರಿಕೆ ಸಲ್ಲಿಸಿದ್ದ ಪಾಕಿಸ್ತಾನದ ಮೇಲೆ ಐಎಂಎಫ್ ಪ್ರತಿಸಲದಂತೆ ಈ ಸಲವೂ ‘ಕೃಪಾದೃಷ್ಟಿ’ ಬೀರಿದೆ. ಇದು ಜಾಗತಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಆಘಾತಕಾರಿ ಹಾಗೂ ಖೇದಕರ ಬೆಳವಣಿಗೆಯಾಗಿದೆ. ಕಳೆದ ಆರು ದಶಕಗಳಲ್ಲಿ ಪಾಕಿಸ್ತಾನವು ಸುಮಾರು 24 ಬಾರಿ ಐಎಂಎಫ್​ನಿಂದ ಸಾವಿರಾರು ಕೋಟಿ ಡಾಲರ್ ಸಾಲ ಪಡೆದಿದೆ. ಪ್ರತಿ ಬಾರಿಯೂ ಆ ಸಾಲವನ್ನು ತೀರಿಸಲಾಗದೆ, ಹೊಸ ಸಾಲದ ಹೊರೆಗೆ ಸಿಲುಕುವುದು ಈ ರಾಷ್ಟ್ರಕ್ಕೆ ‘ಚಾಳಿ’ಯಾಗಿಬಿಟ್ಟಿದೆ. ಈ ಸಾಲದ ಹಣವನ್ನು ಪಾಕಿಸ್ತಾನ ತನ್ನ ಆರ್ಥಿಕ ಸ್ಥಿರತೆಗೆ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ, ಗಡಿಯಾಚೆಗಿನ ಭಯೋತ್ಪಾದನೆಗೆ ಸಹಾಯ ಮಾಡುವುದಕ್ಕಾಗಿ ವಿನಿಯೋಗಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಕಟು ಸತ್ಯವಾಗಿದೆ.

ಭಾರತವು ಈ ಬಾರಿಯ ಐಎಂಎಫ್ ಆಡಳಿತ ಮಂಡಳಿಯ ಸಭೆಗೆ ಮುನ್ನವೇ ಈ ವಿಷಯವನ್ನು ಎಲ್ಲ ಸದಸ್ಯ ರಾಷ್ಟ್ರಗಳ ಗಮನಕ್ಕೆ ತಂದಿತ್ತು. ಪಾಕಿಸ್ತಾನದ ಈ ಹಣ ದುರ್ಬಳಕೆಯ ಇತಿಹಾಸವನ್ನು ಎತ್ತಿ ತೋರಿಸಿ, ಸಾಲ ಮಂಜೂರಾತಿಯ ವಿರುದ್ಧ ಎಚ್ಚರಿಕೆಯ ಗಂಟೆ ಬಾರಿಸಿತ್ತು. ಆದರೆ, ಅಮೆರಿಕ ಮತ್ತು ಐಎಂಎಫ್​ನ ಕೆಲವು ಸದಸ್ಯ ರಾಷ್ಟ್ರಗಳು ತಮ್ಮ ಸ್ವಹಿತಾಸಕ್ತಿಗಾಗಿ ಪಾಕಿಸ್ತಾನಕ್ಕೆ ಸಾಲ ಕೊಡಿಸಲು ಬೆಂಬಲ ನೀಡಿರುವುದು ದುರದೃಷ್ಟಕರವಷ್ಟೇ ಅಲ್ಲ, ಜಾಗತಿಕ ಶಾಂತಿಗೆ ಧಕ್ಕೆ ತರುವಂತಹ ನಡೆಯಾಗಿದೆ.

ಇದಲ್ಲದೆ, ಪಹಲ್ಗಾಮ್ಲ್ಲಿ ಭಯೋತ್ಪಾದಕರು 26 ಅಮಾಯಕರನ್ನು ಕಗ್ಗೊಲೆ ಮಾಡಿದ ಘಟನೆಯಿಂದ ಭಾರತ- ಪಾಕಿಸ್ತಾನದ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿರುವ ಸಂದರ್ಭದಲ್ಲಿ ಐಎಂಎಫ್​ನ ಈ ಸಾಲ ನೀಡಿಕೆಯ ನಿರ್ಧಾರವು ಇನ್ನಷ್ಟು ಆಕ್ಷೇಪಕ್ಕೆ ಎಡೆಯಾಗಿದೆ. ಈ ದುರಂತವು ಪಾಕಿಸ್ತಾನದ ಬೆಂಬಲದಿಂದ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವುದನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಇಂತಹ ಸಂದರ್ಭದಲ್ಲಿ ಐಎಂಎಫ್​ನ ಈ ಕ್ರಮವು ಪಾಕಿಸ್ತಾನದ ವಿಚ್ಛಿದ್ರಕಾರಿ ನೀತಿಗಳಿಗೆ ಮಾನ್ಯತೆ ನೀಡಿದಂತಿದೆ.

ಇದು ಕೇವಲ ಆರ್ಥಿಕ ಸಹಾಯದ ವಿಷಯವಲ್ಲ, ಜಾಗತಿಕ ಭದ್ರತೆ ಮತ್ತು ಶಾಂತಿಯ ಮೇಲೆ ನೇರವಾಗಿ ಪರಿಣಾಮ ಬೀರುವ ಸಂಗತಿ. ಪಾಕಿಸ್ತಾನಕ್ಕೆ ಹೊಸದಾಗಿ ಸಾಲ ಮಂಜೂರು ಮಾಡುವ ಮುನ್ನ, ಆ ಹಣ ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಷರತ್ತುಗಳನ್ನು ಐಎಂಎಫ್ ವಿಧಿಸಬೇಕಿತ್ತು. ಜೊತೆಗೆ, ಭಯೋತ್ಪಾದನೆಗೆ ಈ ಹಣ ಬಳಕೆಯಾಗದಂತೆ ಕಟ್ಟುನಿಟ್ಟಿನ ಕಾರ್ಯವಿಧಾನವನ್ನು ರೂಪಿಸಬೇಕಿತ್ತು. ಆದರೆ, ಐಎಂಎಫ್​ನ ನಿರ್ಧಾರವು ಈ ಎಲ್ಲ ಆತಂಕಗಳನ್ನು ಕಡೆಗಣಿಸಿದಂತಿದೆ.

ಐಎಂಎಫ್​ನ ಈ ಕ್ರಮವು ಅಂತಾರಾಷ್ಟ್ರೀಯ ಸಂಸ್ಥೆಯೊಂದರ ಜವಾಬ್ದಾರಿಯುತ ನಡವಳಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ಪಾಕಿಸ್ತಾನಕ್ಕೆ ಸಾಲ ಕೊಡುವುದರಿಂದ ಜಾಗತಿಕ ಶಾಂತಿಗೆ ಧಕ್ಕೆಯುಂಟಾಗುವುದಾದರೆ, ಐಎಂಎಫ್ ತನ್ನ ಆದ್ಯತೆಗಳನ್ನೇ ಮರುಪರಿಶೀಲಿಸಬೇಕಾಗುತ್ತದೆ. ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ಈ ವಿಷಯದಲ್ಲಿ ಒಗ್ಗಟ್ಟಿನಿಂದ ಧ್ವನಿಯೆತ್ತಿ, ಐಎಂಎಫ್​ನಂತಹ ಸಂಸ್ಥೆಗಳು ಭಯೋತ್ಪಾದನೆಗೆ ಪರೋಕ್ಷವಾಗಿ ಧನಸಹಾಯ ಮಾಡದಂತೆ ಒತ್ತಾಯಿಸಬೇಕಿದೆ. ಇದು ಕೇವಲ ಭಾರತದ ಹಿತಾಸಕ್ತಿಯ ವಿಷಯವಲ್ಲ; ಇದು ಜಾಗತಿಕ ಶಾಂತಿ ಮತ್ತು ಸ್ಥಿರತೆಯ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net