ಪಾಕ್​ ಮನವಿಯಂತೆ ತಕ್ಷಣಕ್ಕೆ 1 ಬಿಲಿಯನ್​ ಡಾಲರ್​ ಸಾಲ ಕೊಟ್ಟ IMF! ಸಿಎಂ ಒಮರ್​ ಅಬ್ದುಲ್ಲಾ ಕಿಡಿ

ವಿಜಯವಾಣಿ - 2025-05-10T095526.887
Published on

IMF: ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವೆ ನಿರಂತರ ಕ್ಷಿಪಣಿ, ಡ್ರೋನ್ ದಾಳಿಗಳು ನಡೆಯುತ್ತಿವೆ. ಎರಡೂ ದೇಶಗಳ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಭಾರತಕ್ಕೆ ಯುದ್ಧ ಸವಾಲು ಹಾಕಿದ ಪಾಕ್​, ಆರ್ಥಿಕ ಸೇರಿದಂತೆ ಹಲವಾರು ಹೊಡೆತಗಳಿಂದ ಬಳಲುತ್ತಿದ್ದರೂ ತನ್ನ ಸೊಕ್ಕು, ನರಿ ಬುದ್ಧಿಯನ್ನು ಇನ್ನೂ ಬಿಟ್ಟಿಲ್ಲ. ಇದಕ್ಕೆ ಕಾರಣ ಐಎಂಎಫ್​ನಿಂದ ಪಡೆದ ಸಾಲ.

ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇವೆ ಎಂದಿದ್ದ ಪಾಕ್​, ವೈರಿ ನಮ್ಮ ದೇಶಕ್ಕೆ ಭಾರೀ ಹಾನಿಯನ್ನುಂಟು ಮಾಡಿದ್ದಾರೆ. ಇದರಿಂದ ಪರಿಸ್ಥಿತಿ ಕಷ್ಟವಾಗಿದೆ. ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿಕೊಂಡಿದ್ದ ಪಾಕ್​, ತಮ್ಮ ಪಾಲುದಾರ ರಾಷ್ಟ್ರಗಳಿಂದ ಹಣದ ಸಹಾಯ ಕೋರಿತ್ತು. ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನ ಮನವಿಗೆ ಸ್ಪಂದಿಸಿದ್ದು, 1 ಬಿಲಿಯನ್ ಡಾಲರ್ ಸಾಲವನ್ನು ಅನುಮೋದಿಸಿದೆ.

ಈ ಬಗ್ಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಐಎಂಎಫ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಪೂಂಚ್, ರಾಜೌರಿ, ಉರಿ, ತಂಗ್ಧರ್ ಮತ್ತು ಇತರ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲು ತನ್ನ ಬಳಿಯಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಪಾಕಿಸ್ತಾನಕ್ಕೆ ಹೊಸದಾಗಿ ಸಾಲ ಕೊಟ್ಟಿರುವುದು ಎಷ್ಟು ಸರಿ? ಇದರಿಂದ ಪ್ರಸ್ತುತ ಉದ್ವಿಗ್ನತೆ ಹೇಗೆ ಕಡಿಮೆಯಾಗುತ್ತದೆ ಎಂದು ಅಂತರರಾಷ್ಟ್ರೀಯ ಸಮುದಾಯ ಭಾವಿಸುತ್ತದೆ ಅಂತ ನನಗಂತು ಅರ್ಥವಾಗುತ್ತಿಲ್ಲ" ಎಂದು ಎಕ್ಸ್‌ ಖಾತೆಯಲ್ಲಿ ಬರೆದು ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net