

ನವದೆಹಲಿ: ಯೋಗ ಹಾಗೂ ಆಯುರ್ವೇದದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತ, ಅನುಕೂಲಗಳನ್ನು ಮಾಡುತ್ತ ಬಂದಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥ, ಯೋಗಗುರು ಬಾಬಾ ರಾಮ್ದೇವ್ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯದ ದನಿಯೊಂದು ಹುಟ್ಟಿಕೊಂಡಿದೆ. ಅಷ್ಟಕ್ಕೂ ಹೀಗೊಂದು ಆಗ್ರಹ ವ್ಯಕ್ತಪಡಿಸುತ್ತಿರುವುದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್.
ಅಲೋಪಥಿ ವೈದ್ಯಪದ್ಧತಿ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಅಪಪ್ರಚಾರ ಮಾಡುವ ಮೂಲಕ ಬಾಬಾ ರಾಮ್ದೇವ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿರುವ ಭಾರತೀಯ ವೈದ್ಯಕೀಯ ಸಂಘವು, ಕೇಂದ್ರ ಸರ್ಕಾರ ಬಾಬಾ ರಾಮ್ದೇವ್ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದೆ.
ಬಾಬಾ ರಾಮ್ದೇವ್ ಸುಶಿಕ್ಷಿತ ಸಮಾಜಕ್ಕೆ ಹಾಗೂ ದೇಶಕ್ಕೆ ಆತಂಕ ಮಾತ್ರವಲ್ಲ ಅವರಿಂದಾಗಿ ಬಡವರು ಬಲಿಪಶುವಾಗುತ್ತಿದ್ದಾರೆ. ಅವರ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಐಎಂಎ ಒತ್ತಾಯಿಸಿದೆ.
ರೆಮ್ಡೆಸಿವಿರ್, ಫೇವಿಫ್ಲ್ಯೂ ಸೇರಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಮಾನ್ಯತೆ ಇರುವ ಇತರ ಎಲ್ಲ ಔಷಧಗಳು ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ವಿಫಲವಾಗಿವೆ. ಲಕ್ಷಾಂತರ ಮಂದಿ ಅಲೋಪಥಿ ಔಷಧಗಳನ್ನು ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ. ಅಲೋಪಥಿ ಒಂದು ಸ್ಟುಪಿಡ್ ಸೈನ್ಸ್ ಎಂದು ರಾಮ್ದೇವ್ ಹೇಳಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಉಲ್ಲೇಖಿಸಿ ಐಎಂಎ ಈ ಒತ್ತಾಯ ಹೇರಿದೆ. (ಏಜೆನ್ಸೀಸ್)