

ಸಿಯಾಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ನಿಗೂಢ ಅನಾರೋಗ್ಯದ ಹಿನ್ನೆಲೆಯಲ್ಲಿ, ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಇದೀಗ ಶುರುವಾಗಿದೆ. ಸತತ ಎಂಟು ವರ್ಷಗಳಿಂದ ಸರ್ವಾಧಿಕಾರಿಯಾಗಿ ಮೆರೆದ ಕಿಮ್ ಜಾಂಗ್‌ನ ಆರೋಗ್ಯದ ಬಗ್ಗೆ ಸದ್ಯ ಯಾವುದೇ ಖಚಿತ ಮಾಹಿತಿ ಸಿಗುತ್ತಿಲ್ಲ. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸ್ಥಿತಿ ಚಿಂತಾಜನಕವಾಗಿ ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯ ಚರ್ಚೆ ಶುರುವಾಗಿದೆ.
ಏಳು ದಶಕಗಳಿಂದ ಕಿಮ್ ಕುಟುಂಬವೇ ಉತ್ತರ ಕೊರಿಯಾವನ್ನು ಆಳುತ್ತಿದ್ದು, 32 ವರ್ಷದವರಿದ್ದಾಗ ಕಿಮ್ ಅಧಿಕಾರಿ ಸ್ವೀಕರಿಸಿದ್ದರು. ಅವರಿಗೀಗ 36 ವರ್ಷ. ಕಿಮ್ ಜಾಂಗ್ ಉನ್‌ನ ಇಬ್ಬರು ಮಕ್ಕಳು ತೀರಾ ಚಿಕ್ಕವರಾಗಿರುವ ಕಾರಣ ಹಾಗೂ ತಮ್ಮ ಉತ್ತರಾಧಿಕಾರಿಯ ಬಗ್ಗೆ ಕಿಮ್ ಜಾಂಗ್ ಉನ್ ಯಾವುದೇ ಮಾಹಿತಿ ನೀಡದೇ ಇರುವ ಕಾರಣ, ಅದಿನ್ನೂ ಕಗ್ಗಂಟಾಗಿ ಉಳಿದಿದೆ.
ಹಿಂದಿನ ಇತಿಹಾಸವನ್ನು ನೋಡಿದಾಗ, ಇಲ್ಲಿವರೆಗೆ ಪುರುಷರು ಮಾತ್ರ ಸರ್ವಾಧಿಕಾರಿಯಾಗಿದ್ದಾರೆ. ಒಂದು ವೇಳೆ ಅದನ್ನೇ ಮುಂದುವರೆಸಿದ್ದೇ ಆದಲ್ಲಿ ಕಿಮ್ ಜಾಂಗ್ ಉನ್ ನ ಹಿರಿಯ ಪುತ್ರ ಉತ್ತರಾಧಿಕಾರಿಯಾಬೇಕು. ಆದರೆ ಸ್ಥಳೀಯ ಮಾಧ್ಯಮಗಳ ಪ್ರಕಾರ, ಹಿರಿಯ ಮಗನ ವಯಸ್ಸು ಕೇವಲ 10 ವರ್ಷ (2010ರಲ್ಲಿ ಹುಟ್ಟಿದ್ದಾನೆ). ಎರಡನೆಯವಳು ಮಗಳು. ಅವಳು ಹುಟ್ಟಿರುವುದು 2013ರಲ್ಲಿ. ಆದ್ದರಿಂದ ವಯಸ್ಸಿನ ಆಧಾರದ ಮೇಲೆ ಮಗ ಇಷ್ಟು ಬೇಗ ಅಧಿಕಾರಕ್ಕೆ ಬರುವುದು ಕಷ್ಟ ಎನ್ನಲಾಗಿದೆ.
ಕಿಮ್ ಜಾಂಗ್ ಚೋ ಎಂಬ ಸಹೋದರ ಕಿಮ್ ಜಾಂಗ್ ಉಂಗ್‌ಗೆ ಇದ್ದು, ಅವರಿಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇಲ್ಲ ಎನ್ನಲಾಗಿದೆ. ರಾಜಕೀಯದಿಂದ ಸದಾ ದೂರ ಇದ್ದ ಇವರು, ಗಿಟಾರ್ ವಾದಕ. ತನಗೆ ರಾಜಕೀಯ ಬೇಡವೇ ಬೇಡ ಎಂದಿರುವ ಕಾರಣ, ಅವರು ಉತ್ತರಾಧಿಕಾರಿಯಾಗುವುದು ಸಂದೇಹ ಎನ್ನಲಾಗಿದೆ. ಇನ್ನುಳಿದವರು ಸೋದರಳಿಯ ಕಿಮ್ ಹ್ಯಾನ್ ಸೋಲ್. ಆದರೆ ಹಿಂದೊಮ್ಮೆ ಅವರ ಮೇಲೆ ಕೊಲೆ ಯತ್ನ ನಡೆದ ನಂತರ ಅವರು ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವುದು ಇದುವರೆಗೂ ಪತ್ತೆಯಾಗಿಲ್ಲ.
ಇವೆಲ್ಲರನ್ನೂ ಹೊರತುಪಡಿಸಿ ಉಳಿದಿರುವುದು ಕಿಮ್ ಯೋ ಜಾಂಗ್. ಈಕೆ ಕಿಮ್ ಜಾಂಗ್ ಉನ್‌ನ ತಂಗಿ. ಶಕ್ತಿಶಾಲಿ ಮಹಿಳೆ ಎಂದೇ ಈಕೆ ಪ್ರಖ್ಯಾತಿ ಹೊಂದಿದ್ದಾರೆ. ಇಲ್ಲಿಯವರೆಗೆ ಪುರುಷರು ಮಾತ್ರ ಆಳ್ವಿಕೆ ನಡೆಸಿದ್ದ ಈ ಕುಟುಂಬದಲ್ಲಿ ಕಿಮ್ ಯೋ ಜಾಂಗ್ ಏನಾದರೂ ಅಧಿಕಾರಕ್ಕೆ ಬಂದರೆ ಇತಿಹಾಸ ನಿರ್ಮಾಣವಾಗುತ್ತದೆ. ಕೆಲ ದಿನಗಳ ಹಿಂದಷ್ಟೇ ಕಿಮ್ ಜಾಂಗ್ ಉನ್ ಈಕೆಯನ್ನು ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಮಿತಿಯೊಂದಕ್ಕೆ ನೇಮಕ ಮಾಡಿರುವ ಕಾರಣ, ಈಕೆಯೇ ಮುಂದಿನ ಉತ್ತರಾಧಿಕಾರಿಯಾಗಬಹುದೆಂಬ ಸುದ್ದಿ ಹರಡಿದೆ.
ಇದಾಗಲೇ ಯೋ ಜಾಂಗ್, ದೇಶಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವನ್ನೂ ತೆಗೆದುಕೊಳ್ಳಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೇ, ಕಿಮ್ ಜಾಂಗ್ ಉನ್ ಗೆ ದೀರ್ಘ ಕಾಲದಿಂದ ಆತ್ಮೀಯ ಸಲಹೆಗಾರ್ತಿಯಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ. ಆದ್ದರಿಂದಲೇ ಈಕೆಯನ್ನು ಎರಡನೆಯ ಬಾರಿಗೂ ಕೇಂದ್ರೀಯ ಸಮಿತಿಯ ರಾಜಕೀಯ ಘಟಕದ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. 2018ರಲ್ಲಿ ಚಳಿಗಾಲದ ಒಲಿಂಪಿಕ್‌ನಲ್ಲಿ ತನ್ನ ಅಣ್ಣನ ಸ್ಥಾನದಲ್ಲಿ ಯೋ ಜಾಂಗ್ ಉತ್ತರ ಕೊರಿಯಾವನ್ನು ಪ್ರತಿನಿಧಿಸಿದ್ದರು. (ಏಜೆನ್ಸೀಸ್)