

ಕೊರಟಗೆರೆ: ನಾನು ಕ್ರೀಡಾಪಟು. ಸೋಲು-ಗೆಲುವನ್ನು ಸಮಾನ ಸ್ಥಿತಿಯಲ್ಲಿ ಸ್ವೀಕರಿಸುತ್ತೇನೆ. ಗೆದ್ದು ಬೀಗಿದ್ದೇನೆ. ಸೋತು ಮತ್ತೆ ಮೇಲೆದ್ದಿದ್ದೇನೆ. ನಾನು ಮೊಂಡ. ನನ್ನೆದುರು ಯಾರೇ ಬಂದರೂ ಹೆದರುವುದಿಲ್ಲ ಎಂದು ಶಾಸಕ ಡಾ.ಜಿ ಪರಮೇಶ್ವರ ಹೇಳಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಒಕ್ಕಲಿಗರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಸಾಕ್ಷಿಯಿದ್ದು, ಪುಸ್ತಕ ರೂಪದಲ್ಲಿ ಮುದ್ರಿಸಿ ಮನೆ ಮನೆಗೆ ಹಂಚುತ್ತಿದ್ದೇನೆ. ಆದರೆ ಜೆಡಿಎಸ್ ಅಭ್ಯರ್ಥಿಗೆ ಅವರು ಮಾಡಿರುವ ಅಭಿವೃದ್ಧಿ ಕೆಲಸದ ಬಗ್ಗೆ ಸಾಕ್ಷಿಯಿದ್ದರೆ ತೋರಿಸಲಿ. ಬಿಜೆಪಿಯವರಿಗೆ ಮೋದಿಯನ್ನು ಬಿಟ್ಟರೆ ಬೇರಾರೂ ಇಲ್ಲ. ಗ್ರಾಪಂ ಚುನಾವಣೆಯನ್ನೂ ಮೋದಿ ಹೆಸರಿನಲ್ಲೇ ಮಾಡುತ್ತಾರೆ. ಇವರಿಗೆ ನಾಚಿಕೆಯಾಗಬೇಕು ಎಂದು ಗುಡುಗಿದರು. ಇದೇ ವೇಳೆ ಮುಂದುವರಿದು ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ನೋಡೋಣ, ಯಾವ ಮೀಸೆಗೂ, ಗೀಸೆಗೂ ನಾನು ಹೆದರೋಲ್ಲ ಎಂದು ಸವಾಲೆಸೆದರು.
ಒಮ್ಮೆಯೂ ಕೊರಟಗೆರೆಗೆ ಭೇಟಿ ನೀಡದ, ಮತದಾರರ ಸಂಪರ್ಕಕ್ಕೆ ಸಿಗದ, ಕ್ಷೇತ್ರಕ್ಕೆ ಯಾವ ಕೊಡುಗೆ ನೀಡದ ಸಂಸದ ಜಿ.ಎಸ್.ಬಸವರಾಜು ಅವರಿಗೆ ಕ್ಷೇತ್ರದ ಪರಿಚಯವೇ ಇಲ್ಲ, ಆದರೂ ಅವರು ಸಂಸದ. ಇದು ನಮ್ಮ ದುರ್ದೈವ. ಅವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಕುಟುಕಿದರು.
ನಾವೆಲ್ಲರೂ ಚೆನ್ನಾಗಿದ್ದೇವೆ ಗೊಂದಲ ಬೇಡ: ನಾನು ಡಿಕೆಶಿ, ಸಿದ್ದರಾಮಯ್ಯ ಕಿತ್ತಾಡಿದ್ದೇವೆ ಎಂದು ನಮ್ಮ ವಿರೋಧಿಗಳು ಹೇಳುತ್ತಿದ್ದಾರೆ. ನಾವು ಮೂವರೂ ಚೆನ್ನಾಗಿದ್ದೇವೆ. ನಮ್ಮಲ್ಲಿ ಗೊಂದಲವಿಲ್ಲ ಎಂದು ಪರಮೇಶ್ವರ ತಿಳಿಸಿದರು.
ಜಿಪಂ ಮಾಜಿ ಸದಸ್ಯರಾದ ಟಿ.ಡಿ.ಪ್ರಸನ್ನಕುಮಾರ್, ಗಂಗಾಧರಪ್ಪ, ತುಮುಲ್ ಹಾಲು ಒಕ್ಕೂಟದ ನಿರ್ದೇಶಕ ಗುಂಡಿನಪಾಳ್ಯ ಈಶ್ವರಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಪುಟ್ಟನರಸಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಭಕ್ತರಹಳ್ಳಿ ಸಿದ್ದಲಿಂಗಪ್ಪ, ತುಮಕೂರು ಕುಂಚಿಟಿಗ ಜಿಲ್ಲಾ ಸಂಘದ ಅಧ್ಯಕ್ಷ ಜಿ.ಎಂ.ಕಾಮರಾಜು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತುಂಬಾಡಿ ರಾಮಚಂದ್ರಯ್ಯ, ಮಾಜಿ ತಾಪಂ ಅಧ್ಯಕ್ಷ ಕೆಂಪಣ್ಣ ಇತರರು ಇದ್ದರು.
ಡಿಕೆಶಿ ಮಾತಿಗೆ ಕೋಟಿ ನಮನ: ನನ್ನಂತಹ ನೂರು ಜನ ಶಾಸಕರನ್ನು ಸೃಷ್ಟಿಸುವ ನಾಯಕ ಪರಮೇಶ್ವರ ಅವರನ್ನು ನೀವು ಕಳೆದುಕೊಳ್ಳಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ಕೊರಟಗೆರೆಯ ರಾಜೀವ್‌ಭವನ ಉದ್ಘಾಟನೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರ ಮಾತಿಗೆ ನನ್ನ ಕೋಟಿ ಕೋಟಿ ನಮನಗಳು ಎಂದು ಪರಮೇಶ್ವರ ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ: ಜೆಡಿಎಸ್‌ಗೆ ಹಲವು ಜಿಲ್ಲೆಗಳಲ್ಲಿ ಅಸ್ತಿತ್ವವೇ ಇಲ್ಲ. ಅವರಿಗೆ ಅಧಿಕಾರ ಎಲ್ಲಿಂದ ಸಿಗುತ್ತದೆ ? ಅವರು ಮೊದಲು 224 ಕ್ಷೇತ್ರಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಹುಡುಕಲಿ, ಬಳಿಕ ಬಹುಮತ ಸ್ಥಾಪಿಸಲು, ಸೀಟು ಗೆಲ್ಲಲು, ಚಿಂತಿಸಲಿ. ಅವರ ಚಿಂತನೆ ಏನಿದ್ದರೂ ವಾಮ ಮಾರ್ಗದಲ್ಲಿ 20-30 ಸೀಟು ಗಳಿಸಿ ಅಧಿಕಾರಕ್ಕಾಗಿ ಹವಣಿಸುವುದಷ್ಟೆ. ಇವರಿಗೆ ಯಾರೂ ಮಣೆ ಹಾಕಬೇಡಿ ಎಂದು ಪರಮೇಶ್ವರ ಕರೆಕೊಟ್ಟರು.
ಬಾಲಗಂಗಾಧರ ಶ್ರೀಗಳೊಂದಿಗೆ ನಮ್ಮ ಕುಟುಂಬ: ಆದಿಚುಂಚನಗಿರಿ ದಿ.ಬಾಲಗಂಗಾಧರ ಶ್ರೀಗಳಿಗೆ, ನಮ್ಮ ತಂದೆಯವರಿಗೆ ಅವಿನಾಭವ ಸಂಬಂಧವಿತ್ತು. ಶ್ರೀಗಳು ತುಮಕೂರಿಗೆ ಬಂದಾಗ ನಮ್ಮ ಮನೆಗೆ ಭೇಟಿ ನೀಡಿ, ನಮ್ಮ ತಂದೆಯೊಂದಿಗೆ ಶಿಕ್ಷಣ ವ್ಯವಸ್ಥೆ ಕುರಿತು ಮಾತನಾಡುತ್ತಿದ್ದರು. ತುಮಕೂರಿನಲ್ಲಿ ಏಕೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸ್ಥಾಪಿಸಿಲ್ಲ ಎಂದರೆ, ಶ್ರೀಗಳು ಅಲ್ಲಿ ನಮ್ಮ ಸಂಸ್ಥೆ ಇದೆಯಲ್ಲ. ಗಂಗಾಧರಯ್ಯ ಅವರ ಸಿದ್ಧಾರ್ಥ ಸಂಸ್ಥೆ ನಮ್ಮದೇ. ಮತ್ತೊಂದು ಸಂಸ್ಥೆ ಏಕೆ ಎನ್ನುವಷ್ಟು ನಮ್ಮ ಮೇಲೆ ಅಭಿಮಾನವಿತ್ತು. ಶ್ರೀಗಳ ಅನಾರೋಗ್ಯ ಸಮಯದಲ್ಲಿ ನನ್ನನ್ನು ಕರೆಯಿಸಿ ಮಠದ ಮುಂದಿನ ದಿನಗಳ ನಿರ್ವಹಣೆ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದರು ಎಂದು ಪರಮೇಶ್ವರ ತಿಳಿಸಿದರು.
ಬಿಬಿಎಂಪಿಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿರುವ ಭ್ರಷ್ಟರೆಲ್ಲ ಇಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಲು ಬಂದಿದ್ದಾರೆ. ಪ್ರತಿಯೊಬ್ಬ ಮತದಾರರು ಪ್ರಜ್ಞಾವಂತರಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವವರಿಗೆ ಮತ ಹಾಕಬೇಕು. ಪಿ.ಎನ್.ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಕ್ಷೇತ್ರದಲ್ಲಿ ಸಮುದಾಯಕ್ಕೆ ಒಂದು ಭವನವಿಲ್ಲ, ರಾಜ್ಯದಲ್ಲಿರುವ ಒಕ್ಕಲಿಗ ನಿಗಮಕ್ಕೆ ಹಣವಿಲ್ಲ. ಕೊರಟಗೆರೆ ಭಾಗದಲ್ಲಿ ರೈತರು ಬೆಳೆಯುವ ಹುಣಸೇಹಣ್ಣಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ, ಬೆಂಬಲ ಬೆಲೆ ನಿಗದಿ ಮಾಡಬೇಕು. ಮುರಳೀಧರ್ ಹಾಲಪ್ಪ, ಕೌಶಲಾಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ