ಅಕ್ರಮ ಸಂಬಂಧ: ಪ್ರಿಯಕರನ ಜೊತೆ ಸೇರಿ ಮದ್ಯಪಾನದಲ್ಲಿ ನಿದ್ದೆ ಮಾತ್ರೆ ಹಾಕಿ ಪತಿಯನ್ನು ಕೊಂದ ಪತ್ನಿ| Murder

ವಿಜಯವಾಣಿ (61)
Published on

Karimnagar: ತೆಲಂಗಾಣದ ಕರಿಂನಗರದ ಸಪ್ತಗಿರಿ ಕಾಲೋನಿಯಲ್ಲಿ ಅಕ್ರಮ ಸಂಬಂಧ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಮದ್ಯಪಾನದಲ್ಲಿ ನಿದ್ದೆ ಮಾತ್ರೆ ಹಾಕಿ ಪತಿಯನ್ನು ಕತ್ತು ಹಿಸುಕಿ ಕೊಂದಿದ್ದಾಳೆ(Murder) ಎಂದು ಶುಕ್ರವಾರ(ಅ. 17) ವರದಿಯಾಗಿದೆ.

ಕಟ್ಟಿ ಸುರೇಶ್(36) ಕೊಲೆಯಾದ ಪತಿ. ಕಟ್ಟಿ ಮೌನಿಕ ಪ್ರಿಯಕರನ ಜೊತೆ ಸೇರಿ ಪತಿ ಕೊಲೆಗೈದ ಮಹಿಳೆ. ಸೆ. 17ರಂದು ಕೊಲೆಗೈದು ಸಹಜ ಸಾವು ಎಂಬಂತೆ ಆರೋಪಿಗಳು ಬಿಂಬಿಸಿದ್ದರು ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಗೌಶ್ ಆಲಂ, ಸುರೇಶ್ ಮತ್ತು ಮೌನಿಕ 2015ರಲ್ಲಿ ಮದುವೆಯಾಗಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ್ದರು. ಸುಮಾರು ಒಂಬತ್ತು ತಿಂಗಳ ಹಿಂದೆ, ಮೌನಿಕಾ ಮಾಂಸ ವ್ಯಾಪಾರವನ್ನು ಆರಂಭಿಸಿದ್ದಳು. ಡೊಮ್ಮತಿ ಅಜಯ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

ಈ ಹಿನ್ನೆಲೆ ಪತಿ ಸುರೇಶ್ ಆಗಾಗ್ಗೆ ಮೌನಿಕಾಳನ್ನು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನು. ಇದರಿಂದಾಗಿ ಅವಳು ವೈದ್ಯಕೀಯ ಏಜೆನ್ಸಿ ಮಾಲೀಕ ಪೋತು ಶಿವ ಕೃಷ್ಣ ಸೇರಿದಂತೆ ಆಕೆಯ ಸಹಚರರೊಂದಿಗೆ ಸೇರಿ ಅವನ ಕೊಲೆಗೆ ಸಂಚು ರೂಪಿಸುತ್ತಿದ್ದಳು. ಮೊದಲ ಎರಡು ಬಾರಿಯ ಪ್ರಯತ್ನದಲ್ಲಿ ಕೊಲೆ ಮಾಡಲು ರೂಪಿಸಿದ್ದ ಸಂಚು ವಿಫಲವಾಗಿದ್ದವು. ಮೊದಲ ಪ್ರಯತ್ನದಲ್ಲಿ ಸುರೇಶ್ ಅವರ ಆಹಾರದಲ್ಲಿ ವಯಾಗ್ರ ಮತ್ತು ಬಿಪಿ ಮಾತ್ರೆಗಳನ್ನು ಬೆರೆಸಿದ್ದರು. ಆದರೆ ಸುರೇಶ್ ಅದನ್ನು ತಿನ್ನಲು ನಿರಾಕರಿಸಿದ್ದನು.

ಎರಡನೇ ಬಾರಿಗೆ ಮದ್ಯಪಾನದಲ್ಲಿ ನಿದ್ದೆ ಮಾತ್ರೆ ಬೆರೆಸಿದ್ದರು ಅದರಲ್ಲೂ ಕೂಡ ವಿಫಲರಾಗಿದ್ದರು. ಆದರೆ ಮೂರನೇ ಬಾರಿ ಸೆ. 17ರಂದು ಮೌನಿಕಾ ಸುರೇಶ್‌ನ ಮದ್ಯಕ್ಕೆ ನಿದ್ದೆ ಮಾತ್ರೆಗಳನ್ನು ಬೆರೆಸಿ ಕೊಟ್ಟಳು. ಅವನು ಪ್ರಜ್ಞೆ ತಪ್ಪಿದ ಕೂಡಲೇ, ಅವಳು ಮತ್ತು ಪ್ರಿಯಕರ ಸೇರಿ ಕತ್ತು ಹಿಸುಕಿ ಕೊಂದು, ಸಹಜ ಸಾವು ಎಂಬಂತೆ ತೋರಿಸಲು ನಾಟಕವಾಡಿದ್ದರು. ಸದ್ಯ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net