

New Delhi: ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ ಸೆಪ್ಟೆಂಬರ್ 24ರಂದು ನಡೆದ ಹಿಂಸಾಚಾರದಲ್ಲಿ(Ladakh violence) 4 ಜನರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಇಂದು(ಅ. 17) ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ಮತ್ತು ಸ್ವಾಯತ್ತತೆಗಾಗಿ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಹಾಗೂ ಬಂಧಿಸಲ್ಪಟ್ಟವರಿಗೆ ಬೆಂಬಲವಾಗಿ ನಾಳೆ ಲೇಹ್ ಅಪೆಕ್ಸ್ ಬಾಡಿ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸುವ ಮುಂಚೆಯೇ ಕೇಂದ್ರ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.
ಇನ್ನೂ ಲೇಹ್ ಅಪೆಕ್ಸ್ ಬಾಡಿ ಸದಸ್ಯರು, ಲೇಹ್-ಲಡಾಖ್ಗೆ ರಾಜ್ಯಸ್ಥಾನಮಾನ ಮತ್ತು ಸ್ವಾಯತ್ತತೆ ಬಗ್ಗೆ ಮಾತುಕತೆಗಳನ್ನು ಪುನರಾರಂಭಿಸಲು ಅಥವಾ ತಮ್ಮ ಬೇಡಿಕೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಸೆ. 24ರಂದು ಲಡಾಖ್ನಲ್ಲಿ ಆರನೇ ಶೆಡ್ಯೂಲ್ ಸ್ಥಾನಮಾನ ಮತ್ತು ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆಯೂ ಹಿಂಸಾಚಾರದ ರೂಪ ಪಡೆದು ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದವು. ಇದರ ಪರಿಣಾಮವಾಗಿ ನಾಲ್ವರು ಸಾವನ್ನಪ್ಪಿದರು ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಹಿಂಸಾಚಾರದ ಘಟನೆ ಬಳಿಕ ಲಡಾಖ್ನಲ್ಲಿ ಕರ್ಪ್ಯೂ ವಿಧಿಸಿ, ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಿದ್ದರು. ಜೊತೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಆರೋಪ ಹೊರಿಸಲಾದ LAB ನಾಯಕ ವಾಂಗ್ಚುಕ್ ಸೇರಿದಂತೆ 70 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ಸದ್ಯ ಇಂಟರ್ನೆಟ್ ಸೇರಿ ಕೆಲ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. (ಏಜೆನ್ಸೀಸ್)