ನಿಯಮ ಉಲ್ಲಂಸಿ ಪಿಯು ಉಪನ್ಯಾಸಕರಿಗೆ ಬಡ್ತಿ?

resultt
Published on

ಬೆಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಲವೇ ಮಂದಿ ಉಪನ್ಯಾಸಕರ ಹಿತ ಕಾಯುವುದಕ್ಕಾಗಿ ನಿಯಮ ಉಲ್ಲಂಸಿ ಬಡ್ತಿ ನೀಡುವ ಪ್ರಕ್ರಿಯೆಯ ಮುಂದಾಗಿದೆ ಎಂದು ಪಿಯು ಉಪನ್ಯಾಸಕರು ಆರೋಪಿಸಿದ್ದಾರೆ.

1996-97ನೇ ಸಾಲಿನಲ್ಲಿ ನೇಮಕವಾದ ಪಿಯು ಉಪನ್ಯಾಸಕರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಾಂಶುಪಾಲ ಹುದ್ದೆಗೆ ಜ್ಯೇಷ್ಠತೆ ಆಧಾರದಲ್ಲಿ ಮುಂಬಡ್ತಿ ನೀಡಲು ಹೊರಟಿದೆ. ಇದಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಿಯು ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಚಿವರ ಪತ್ರದಲ್ಲಿ ಏನಿದೆ?


1996-97ನೇ ಸಾಲಿನಲ್ಲಿ ಕೆಪಿಎಸ್ಸಿ ಯಿಂದ ನೇಮಕವಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು 27 ವರ್ಷಗಳಿಂದ ಯಾವುದೇ ಮುಂಬಡ್ತಿ ಇಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಉಪನ್ಯಾಸಕರು ಯಾವುದೇ ಬಡ್ತಿ ಪಡೆಯದೇ ನಿವೃತ್ತರಾಗಿದ್ದು, ಮತ್ತೆ ಕೆಲವು ನಿವೃತ್ತಿಯಂಚಿನಲ್ಲಿದ್ದಾರೆ.

ರಾಜ್ಯದ ಹಲವು ಸರ್ಕಾರಿ ಪಿಯು ಕಾಲೇಜುಗಳಲ್ಲಿ 500ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ.

1996-97ನೇ ಸಾಲಿನಲ್ಲಿ ಕೆಪಿಎಸ್ಸಿ ಯಿಂದ ನೇಮಕಾತಿಯಾದ ಉಪನ್ಯಾಸಕರು ಬಡ್ತಿಯಿಂದ ವಂಚಿತರಾಗಿರುವುದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ನೇರ ನೇಮಕಾತಿಗಾಗಿ ಕಾಯ್ದಿರಿಸಿರುವ ಪ್ರಾಂಶುಪಾಲರ ಹುದ್ದೆಗಳನ್ನೂ ಒಳಗೊಂಡಂತೆ ಮಾನವೀಯತೆ ಆಧಾರದ ಮೇಲೆ ಒಂದೇ ಕಂತಿನಲ್ಲಿ ಖಾಲಿ ಇರುವ ಎಲ್ಲ ಪ್ರಾಂಶುಪಾಲರ ಹುದ್ದೆಗಳಿಗೆ ಜ್ಯೇಷ್ಠತೆ ಆಧಾರದ ಮೇರೆಗೆ ಒಂದು ಬಾರಿಗೆ ಅನ್ವಯವಾಗುವಂತೆ ಶೀಘ್ರವಾಗಿ ಮುಂಬಡ್ತಿ ನೀಡುವಂತೆ ಪಿಯು ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದೇರೆಂದು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಬಡ್ತಿ ನಿಯಮಗಳೇನಿದೆ?


ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2016ರಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಪಿಯು ನಿರ್ದೇಶಕರು ಅವರನ್ನು ಒಳಗೊಂಡ ಸಮಿತಿಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿದೆ.
ಆ ಪ್ರಕಾರ, ಶೇ.75 ಹುದ್ದೆಗಳನ್ನು ಬಡ್ತಿ ಮೂಲಕ ಮತ್ತು ಉಳಿದ ಶೇ.25 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಬೇಕು ಎಂಬ ನಿಯಮವಿದೆ. ಆದರೆ, ಶಿಕ್ಷಣ ಇಲಾಖೆಯು ಶೇ.100 ಅನ್ನು ಬಡ್ತಿ ಮೂಲಕವೇ ಭರ್ತಿ ಮಾಡಲು ಹೊರಟಿದೆ ಎಂದು ತಿಳಿದು ಬಂದಿದೆ.

ಸಚಿವರು ತಮಗೆ ಬರೆದಿರುವ ಪತ್ರದ ಪ್ರತಿ ಇನ್ನೂ ತನಗೆ ತಲುಪಿಲ್ಲ. ಒಂದು ವೇಳೆ ಶೇ.100 ಬಡ್ತಿ ನೀಡಬೇಕಾದರೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಪತ್ರ ತಲುಪಿದ ನಂತರ ಪ್ರತಿಕ್ರಿಯಿಸುತ್ತೇನೆ.- ಸಿಂಧೂ ಬಿ. ರೂಪೇಶ್, ಪಿಯು ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net