ವಿದೇಶಿ ಚಾಕೊಲೇಟ್ ಅಕ್ರಮ ಮಾರಾಟ

arrest (1)
Published on

ಬೆಂಗಳೂರು: ವಿದೇಶಗಳಿಂದ ಚಾಕೊಲೇಟ್, ಬಿಸ್ಕತ್, ತಂಪುಪಾನೀಯ ಸೇರಿ ಇನ್ನಿತರ ಆಹಾರ ಪದಾರ್ಥ ಆಮದು ಮಾಡಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ನರೇಂದ್ರ ಸಿಂಗ್ (45) ಬಂಧಿತ. 1 ಕೋಟಿ ರೂ. ಮೌಲ್ಯದ ಚಾಕೊಲೇಟ್, ಬಿಸ್ಕತ್, ತಂಪುಪಾನೀಯ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಐದಾರು ವರ್ಷಗಳಿಂದ ಆರೋಪಿಯು ಈ ದಂಧೆಯಲ್ಲಿ ಸಕ್ರಿಯನಾಗಿದ್ದ. ಚಾಕೊಲೇಟ್, ಬಿಸ್ಕತ್ ಹಾಗೂ ತಂಪುಪಾನೀಯ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನು ವಿದೇಶದಿಂದ ಹಡಗಿನ ಮೂಲಕ ಮುಂಬೈ ಬಂದರಿಗೆ ತರಿಸಿಕೊಳ್ಳುತ್ತಿದ್ದ. ಅಲ್ಲಿಂದ ವಾಹನಗಳ ಮೂಲಕ ಅಕ್ರಮವಾಗಿ ನಗರಕ್ಕೆ ಪಾರ್ಸೆಲ್ ಪಡೆದು ಕಲಾಸಿಪಾಳ್ಯ ಸಮೀಪದ ಸುಧಾಮನಗರದ ನಾರಾಯಣಸ್ವಾಮಿ ಲೇಔಟ್‌ನಲ್ಲಿರುವ ಗೋದಾಮಿನಲ್ಲಿ ಶೇಖರಿಸಿಕೊಳ್ಳುತ್ತಿದ್ದ.

ಆನಂತರ ಆಹಾರ ಪದಾರ್ಥಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಸ್ಟಿಕ್ಟರ್‌ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್, ಮಾಲ್ಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ನಾರಾಯಣಸ್ವಾಮಿ ಲೇಔಟ್ ಗೋದಾಮಿನ ಮೇಲೆ ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net