ಪ್ರವಾಸಿಗರಿಗೆ ಮದ್ಯ ಅಕ್ರಮ ಮಾರಾಟ

13 HANUR 4 B
ತೆಪ್ಪ ವಿಹಾರದಲ್ಲಿ ಇರುವಾಗಲೇ ಪ್ರವಾಸಿಗರಿಗೆ ಮದ್ಯವನ್ನು ನೀಡುತ್ತಿರುವುದು.
Published on

ಹನೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ರಾಜಾರೋಷವಾಗಿಯೇ ಮದ್ಯ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಕೆಲ ಸ್ಥಳೀಯರು ದಂಧೆಯಾಗಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬೆಟ್ಟ-ಗುಡ್ಡಗಳಿಂದ ಆವೃತವಾದ ಹೊಗೇನಕಲ್ ಫಾಲ್ಸ್ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ತೆಪ್ಪ ವಿಹಾರಕ್ಕೆ ಅವಕಾಶವಿದೆ. ಹಾಗಾಗಿ ಇಲ್ಲಿಗೆ ಕರ್ನಾಟಕ ಹಾಗೂ ತಮಿಳುನಾಡಿನ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಕೆಲ ಯುವಕರು ನಗರ ಪ್ರದೇಶಗಳಿಂದ ಮೋಜು ಮಸ್ತಿಗಾಗಿಯೇ ಆಗಮಿಸುತ್ತಾರೆ. ಇದರ ಲಾಭವನ್ನು ಪಡೆದ ಸಮೀಪದ ಮಾರಿಕೊಟೈ ಗ್ರಾಮದ ಕೆಲ ಸ್ಥಳೀಯರು ಅಕ್ರಮವಾಗಿ ಮದ್ಯ ಸಂಗ್ರಹಿಸಿಕೊಂಡು ಪ್ರವಾಸಿಗರು ತೆಪ್ಪದಲ್ಲಿ ವಿಹಾರದಲ್ಲಿ ಇರುವಾಗಲೇ ಸ್ಥಳಕ್ಕೆ ತೆರಳಿ ಹೆಚ್ಚಿನ ಬೆಲೆಗೆ ರಾಜಾರೋಷವಾಗಿಯೇ ಮಾರಾಟ ಮಾಡಲಾಗುತ್ತಿದ್ದಾರೆ.

ಇದರಿಂದ ಕೆಲ ಪ್ರವಾಸಿಗರು ತೆಪ್ಪ ವಿಹಾರದಲ್ಲಿಯೇ ಮದ್ಯ ಸೇವಿಸಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕುಡಿದ ಅಮಲಿನಲ್ಲಿ ಪ್ರಾಣಾಪಾಯ ಸಂಭವಿಸಿದರೆ ಯಾರು ಹೊಣೆ? ಎಂಬ ಪ್ರಶ್ನೆ ಮೂಡಿದೆ.

ಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಕ್ರಮಕೈಗೊಳ್ಳದೇ ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದರ ಮೂಲಕ ಫಾಲ್ಸ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net