ಅಕ್ರಮ ಗೇಮಿಂಗ್ ಹಗರಣ: ವೀರೇಂದ್ರ ಬಂಧನ ಪ್ರಶ್ನಿಸಿ ಪತ್ನಿ ಕೋರ್ಟ್‌ಗೆ:

Published on

ಬೆಂಗಳೂರು: ಬೆಟ್ಟಿಂಗ್ ದಂಧೆ ಆರೋಪದ ಮೇಲೆ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಂಧಿಸಿರುವುದು ಕಾನೂನು ಬಾಹಿರ ಎಂದು ಘೋಷಿಸಿ, ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಕೋರಿ ಪತ್ನಿ ಆರ್.ಡಿ.ಚೈತ್ರಾ ಹೈಕೋರ್ಟ್‌ಗೆ ಅರ್ಜಿಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಆನ್ಲೈನ್ ಹಾಗೂ ಆಫ್ಲೈನ್ ಅಕ್ರಮ ಗೇಮಿಂಗ್ ಪ್ರಕರಣ ಸಂಬಂಧ 2022ರ ಜು.6ರಂದು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿತ್ತು. ಈ ಎ್ಐಆರ್‌ನಲ್ಲಿ ಯಾರೊಬ್ಬರ ಹೆಸರು ಉಲ್ಲೇಖವಾಗಿರಲಿಲ್ಲ. ಈ ಎ್ಐಆರ್ ಆಧರಿಸಿ 2025ರ ಆ.21ರಂದು ಇ.ಡಿ. ಇಸಿಐಆರ್ ದಾಖಲಿಸಿತ್ತು.

ಆ.23ರಂದು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಚಿತ್ರದುರ್ಗದ ಶಾಸಕರಾದ ತಮ್ಮ ಪತಿ ಕೆ.ಸಿ ವೀರೇಂದ್ರ ಅವರನ್ನು ಬಂಧಿಸಿದೆ. ದುರುದ್ದೇಶಪೂರ್ವಕವಾಗಿ ಮತ್ತು ಟಾರ್ಗೆಟ್ ಮಾಡಿ ತಮ್ಮ ಪತಿಯನ್ನು ಇ.ಡಿ. ಬಂಧಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಅಲ್ಲದೆ, 10-15 ವರ್ಷಗಳ ಹಿಂದೆ ದಾಖಲಾಗಿದ್ದ ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟ ಪ್ರಕರಣ ಆಧರಿಸಿ ಇದೀಗ ಇ.ಡಿ. ತನಿಖೆ ನಡೆಸುತ್ತಿದೆ. ಈ ಪ್ರಕರಣ ಈಗಾಗಲೇ ಮುಕ್ತಾಯಗೊಂಡಿದೆ. ಯಾವುದೇ ಅನುಸೂಚಿಸಿ ಪ್ರಕರಣ ಇಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಇನ್ನು, ಅವರು ಚುನಾವಣೆಯ ವೇಳೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಲೋಕಾಯುಕ್ತರಿಗೂ ಕಾಲ ಕಾಲಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ.

ಬಂಧನಕ್ಕೆ ಸೂಕ್ತ ಕಾರಣಗಳನ್ನು ಇ.ಡಿ. ನೀಡಿಲ್ಲ. ಇದು ಸಂವಿಧಾನದ ಪರಿಚ್ಛೇದ 19 ಮತ್ತು 21 ಅಡಿಯಲ್ಲಿ ದೊರೆತಿರುವ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆ. ಆದ್ದರಿಂದ ವೀರೇಂದ್ರ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸಬೇಕು. ತಕ್ಷಣ ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net