

ಬೆಂಗಳೂರು: ಮಹಾನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಪ್ರದರ್ಶಿಸುವವರಿಗೆ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕುಮಾರಕೃಪಾ ಅತಿರ್ಥಿ ಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಲು ಅವಕಾಶ ನೀಡುವುದಿಲ್ಲ. ನಗರವನ್ನು ವಿರೂಪಗೊಳಿಸಲು ಮುಂದಾಗುವ ಯಾರೇ ಆದಲ್ಲಿ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಈಗಾಗಲೇ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ. ಸುಮಾರು 134 ದೂರುಗಳನ್ನು ಸ್ವೀಕರಿಸಿದ್ದು, ಇದನ್ನಾಧರಿಸಿ 40 ಪ್ರಕರಣಗಳಲ್ಲಿ ಎಫ್ಐಆರ್ನ್ನು ಅಧಿಕಾರಿಗಳು ದಾಖಲಿಸಿದ್ದಾರೆ. ಮುಂದೆಯೂ ಕೂಡ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು.
ಇನ್ನು ಮುಂದೆ ಸರ್ಕಾರದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಪ್ರಕಾರಕ್ಕೆ ಜಾಹೀರಾತು ಫಲಕ ಹಾಕುವುದಿದ್ದಲ್ಲಿ ಅದಕ್ಕೂ ನಿಯಮಾನುಸಾರವೇ ಅಳವಡಿಸಲಾಗುವುದು. ಇದಕ್ಕೆಂದೇ ನೀತಿಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಈ ಹಿಂದೆ ಏನಾಗಿದೆಯೋ ಗೊತ್ತಿಲ್ಲ. ಇನ್ನು ಮುಂದೆ ಯಾವುದೇ ಪಕ್ಷ, ಸಂಘಟನೆ ಹಾಗೂ ಖಾಸಗಿ ಕಂಪನಿಗಳು ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಿವಕುಮಾರ್ ವಿವರಿಸಿದರು.