

ಬೆಂಗಳೂರು: ಬಿಜೆಪಿ ಆಡಳಿತ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ದಾಖಲೆಗಳು ಸಿಕ್ಕಿವೆ. ಬಿಜೆಪಿ ಸಮಯದಲ್ಲಿನ ಅಕ್ರಮ ಹಣ ವರ್ಗಾವಣೆಯ ಪ್ರಕರಣಗಳು ಕೆಲವು ಲೋಕಾಯುಕ್ತ ತನಿಖೆ ಸೇರಿದಂತೆ ಇತರೇ ತನಿಖೆಯಾಗಿವೆ. ಕೆಲವು ಹಣ ಮತ್ತೆ ಮರಳಿ ಬಂದಿದೆ. ಈ ರೀತಿ ಗಮನಕ್ಕೆ ಬರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಚಿವ ನಾಗೇಂದ್ರ ರಾಜೀನಾಮೆ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ಮೇಲೆ ಮಾಡಿರುವ ಆರೋಪವನ್ನು ಪರಿಶೀಲಿಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿ, ಸಚಿವರುಗಳಿಗೆ ಹಿಂದೆ ಯಾವ, ಯಾವ ಪ್ರಕರಣಗಳು ನಡೆದಿವೆ ಎಂದು ಅವರಿಗೂ ತಿಳಿದಿವೆ. ಬಿಜೆಪಿ ಇದ್ದಾಗಲೂ ಈ ರೀತಿಯ ಪ್ರಕರಣಗಳು ನಡೆದಿವೆ. ಹಗರಣಗಳ ಬಗ್ಗೆ ಮಾಹಿತಿಯೂ ಬಂದಿದೆ. ದಾಖಲೆಯೂ ಸಿಕ್ಕಿದೆ. ಬಿಜೆಪಿಯವರು ಹಗರಣ ಮಾಡಿದ್ದಾರೋ ಬಿಟ್ಟಿದ್ದಾರೋ ಅದರ ಬಗ್ಗೆ ಈಗಲೇ ಮಾತನಾಡಲು ಹೋಗುವುದಿಲ್ಲ. ಆದರೆ ಎಲ್ಲವನ್ನು ತನಿಖೆಗೆ ಒಳಪಡಿಸುತ್ತೇವೆ ಎಂದರು.
ಎಲ್ಲಾ ನಿಗಮದ ಅಧ್ಯಕ್ಷರನ್ನು ಕರೆದು ಚರ್ಚೆ ನಡೆಸಲಾಗುವುದು. ಬಡ್ಡಿ ಆಸೆಗೆ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಸಿಎಂ ಹಾಗೂ ಆರ್ಥಿಕ ಇಲಾಖೆಯವರು ಒಂದಷ್ಟು ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಯಲ್ಲಿ ಬಳಕೆಯಾಗಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ ಬಿಜೆಪಿಯ ದಡ್ಡತನದ ಹೇಳಿಕೆ ಎಂದರು.
ಸಚಿವರ ಗಮನಕ್ಕೆ ಬಾರದೆ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆಯೇ ಎಂದಾಗ ಈ ರೀತಿ ಮಾಡಲು ಆಗುವುದಿಲ್ಲ, ಮಾಡಬಾರದು. ಬೋಡ್‌ರ್ ರೆಸಲ್ಯೂಷನ್ ಇಲ್ಲದೆ ಒಂದು ಬ್ಯಾಂಕಿನ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಲು ಆಗುವುದಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ಅನೇಕ ಬ್ಯಾಂಕಿನವರು ಬಂದು ನಮ್ಮಲ್ಲಿ ಠೇವಣಿ ಇಡಿ ಎಂದು ಕೇಳುತ್ತಿದ್ದರು, ನಾನು ಇದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ವಿವರಿಸಿದರು.
ಪ್ರತಿ ನಿಗಮಕ್ಕೆ ಎಸಿಎಸ್ ಕಾರ್ಯದರ್ಶಿಗಳು ಇರುತ್ತಾರೆ. ಇಂತಹ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಮುಖ್ಯಮಂತ್ರಿಯವರು ಈ ವಿಚಾರವಾಗಿ ಈಗಾಗಲೇ ಎಸ್ ಐಟಿ ರಚನೆ ಮಾಡಿ ತನಿಖೆಗೆ ನೀಡಿದ್ದಾರೆ. ಒಂದು ಬ್ಯಾಂಕಿನಲ್ಲಿ ಈ ರೀತಿಯ ಅಕ್ರಮ ಕಂಡುಬಂದರೆ ಪ್ರಕರಣದ ತನಿಖೆ ನೇರವಾಗಿ ಸಿಬಿಐಗೆ ತಲುಪುತ್ತದೆ. ಅವರು ಸಹ ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಚಿವ ನಾಗೇಂದ್ರ ಅವರು ನನ್ನ ಬಳಿ ಚರ್ಚೆ ನಡೆಸಿದ್ದರು. ರಾಜೀನಾಮೆ ನೀಡಿ ಎಂದು ನಾವು ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು
ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಸಿಬಿಐ ಸೇರಿದಂತೆ ಯಾವುದೇ ರೀತಿಯ ತನಿಖೆಗೆ ನೀಡಿ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಸಚಿವ ನಾಗೇಂದ್ರ ಅವರು ನನ್ನ ಬಳಿ ಚರ್ಚೆ ನಡೆಸುವ ವೇಳೆ ಹೇಳಿದರು. ಯಾವುದೇ ಸಚಿವರಿಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಧೈರ್ಯ ಬರುವುದಿಲ್ಲ ಎಂದರು.
ಬುಧವಾರ ಸಂಜೆ ಅವರ ಬಳಿ ವಾಸ್ತವಾಂಶ ಏನಾಗಿದೆ ಎಂದು ತಿಳಿದುಕೊಂಡೆವು. ಸಿಎಂ ಅವರು ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಧ್ಯಮಗಳ ವರದಿ ಸುಳ್ಳು. ಪಕ್ಷಕ್ಕೆ ಮುಜುಗರವಾಗುವುದು ಬೇಡ ಎನ್ನುವುದು ನಾಗೇಂದ್ರ ಅವರ ಅಭಿಲಾಷೆ. ಆದ ಕಾರಣ ರಾಜೀನಾಮೆ ತೀರ್ಮಾನ ಮಾಡುತ್ತೇನೆ ಎಂದು ನಮ್ಮ ಜತೆ ಹೇಳಿದ್ದರು ಎಂದು ತಿಳಿಸಿದರು.
ಈಗಾಗಿರುವ ಸೋಲಿನಿಂದ ನಾವು ಚೇತರಿಸಿಕೊಳ್ಳಬೇಕು. ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ. ನನ್ನನ್ನು ನಂಬಿರುವ ಜನ, ಕಾರ್ಯರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡುತ್ತೇನೆ. ನನ್ನ ದೇಹದ ಕೊನೆಯ ರಕ್ತದ ಹನಿ ಇರುವ ತನಕ ನಂಬಿರುವ ಕಾರ್ಯಕರ್ತರ ರಕ್ಷಣೆ ಮಾಡಲು ತಂತ್ರ, ಪ್ರತಿತಂತ್ರ ಏನು ಮಾಡಬೇಕೋ ಎಲ್ಲವೂ ಗೊತ್ತಿದೆ. ದೊಡ್ಡ, ದೊಡ್ಡ ನಾಯಕರು ಸೋತಿದ್ದಾರೆ. ಇದು ನನ್ನ ವೈಯಕ್ತಿಕ ಸೋಲು ಎಂದು ಹೇಳಿದರು.
ಲೋಕಸಭಾ ಚುನಾವಣೆ ಸೋಲಿನ ಪರಾಮರ್ಶೆ ಮಾಡುವಿರಾ ಎಂದಾಗ ಇದೇ ಜೂ. 8 ರಂದು ಸಭೆ ನಡೆಸಬೇಕು ಎಂದು ಆಲೋಚನೆ ಇತ್ತು. ಅಂದು ದೆಹಲಿಗೆ ತೆರಳುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು. ಈಗಲೇ ದುರಸ್ಥಿ ಮಾಡಬೇಕಲ್ಲವೇ? ಎಲ್ಲಾ ಸಚಿವರು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಯಾರನ್ನೂ ಇಲ್ಲಿ ದೂಷಣೆ ಮಾಡುವುದಿಲ್ಲ ಎಂದು ಹೇಳಿದರು.