

ಧಾರವಾಡ: ನಗರದ ತಡಸಿನಕೊಪ್ಪದ ಬಳಿ 61 ಎಕರೆ ವಿಸ್ತಾರದ ಪ್ರದೇಶದಲ್ಲಿ 117 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ನೂತನ ಕಟ್ಟಡ ಕಾಮಗಾರಿಯು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ತಡಸಿನಕೊಪ್ಪದಲ್ಲಿ ನಿರ್ವಣವಾಗುತ್ತಿರುವ ಐಐಐಟಿ ಕಟ್ಟಡ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ವಿವಿಧೋದ್ದೇಶ ಸಭಾಂಗಣ, ವರ್ಗಕೋಣೆಗಳು, ಆಡಳಿತ ಭವನ, ವಿದ್ಯಾರ್ಥಿ ನಿಲಯದ ಕಟ್ಟಡಗಳನ್ನು ಪರಿಶೀಲಿಸಿ ಮಾತನಾಡಿದರು.
ವಿದ್ಯಾಕೇಂದ್ರ ಎನಿಸಿರುವ ಧಾರವಾಡಕ್ಕೆ ಐಐಐಟಿ ಬರಲು ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ, ಈಗ ಕೇಂದ್ರ ಸಚಿವರಾಗಿರುವ ಪ್ರಲ್ದಾದ ಜೋಶಿ ಹಾಗೂ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿಗಳಾಗಿದ್ದ ಡಾ. ರಜನೀಶ್ ಗೋಯೆಲ್ ಅವರು ನೀಡಿದ ಸಹಕಾರ ಸ್ಮರಣೀಯ. ಐಐಐಟಿಯ ಹೊಸ ಕಟ್ಟಡ ನಿರ್ವಿುಸಲು ಈ ಮುಂಚೆ ಸಿದ್ಧಪಡಿಸಿದ್ದ ವಿನ್ಯಾಸ ನಿರೀಕ್ಷೆಗೆ ಅನುಗುಣವಾಗಿರಲಿಲ್ಲ. ಧಾರವಾಡದ ಕರ್ನಾಟಕ ವಿ.ವಿ., ಕೃಷಿ ವಿ.ವಿ., ಕೆಸಿಡಿಯಂತೆ ನಗರದ ಹೆಗ್ಗುರುತಾಗಿ ಗುರುತಿಸಲ್ಪಡುವ ಮಾದರಿಯಲ್ಲಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲು ಸೂಚಿಸಿ ಪುನರ್ ರಚಿಸಲಾಯಿತು. ಅದರಂತೆ ಸುಂದರ ಹಾಗೂ ಭವ್ಯ ಕಟ್ಟಡ ತಲೆ ಎತ್ತಿವೆ. ಇಲ್ಲಿ ಐಐಐಟಿ ಸ್ಥಾಪನೆಯಾಗಲು ತಡಸಿನಕೊಪ್ಪ ಹಾಗೂ ಸುತ್ತ್ತನ ಗ್ರಾಮಸ್ಥರು ನೀಡಿದ ಸಹಕಾರ ಮಹತ್ವದ್ದಾಗಿದೆ. ಐಐಐಟಿಯು ಸರ್ಕಾರದ ಹೂಡಿಕೆಯೊಂದಿಗೆ ನಿರ್ವಣವಾಗುತ್ತವೆ. ಮುಂದೆ ಅನುದಾನವಿಲ್ಲದೆ ವಿದ್ಯಾರ್ಥಿಗಳ ಶುಲ್ಕ, ಸಂಶೋಧನೆ ಚಟುವಟಿಕೆಗಳ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ಸ್ವಾಯತ್ತತೆಯಿಂದ ನಿರ್ವಹಿಸಲ್ಪಡುತ್ತದೆ ಎಂದರು.
ಐಐಐಟಿ ನಿರ್ದೇಶಕ ಡಾ. ಕವಿ ಮಹೇಶ, ರಿಜಿಸ್ಟ್ರಾರ್ ಚನ್ನಪ್ಪ ಅಕ್ಕಿ, ಮುಖಂಡರಾದ ಯಲ್ಲಪ್ಪ ಅರಿವಾಳದ, ಮಂಜುಳಾ ಅಕ್ಕೂರ ಇತರರಿದ್ದರು.