ಲಕ್ಷಾಂತರ ಸಂಬಳ ಪಡೆಯೋ ನಿಮಗೆ ಸಾಕ್ಸ್ ಖರೀದಿ ಮಾಡೋಕಾಗಲ್ವಾ? IIT ಫ್ರೊಫೆಸರ್​ ಕೊಟ್ಟ ಉತ್ತರ ವೈರಲ್

IIT Bombay professor
Published on

ನವದೆಹಲಿ: ಬಾಂಬೆ ಐಐಟಿ ಪ್ರಾಧ್ಯಾಪಕರೊಬ್ಬರು ( IIT professor ​​) ರಾಷ್ಟ್ರ ರಾಜಧಾನಿ ದೆಹಲಿ ಫೈವ್​ ಸ್ಟಾರ್​ ಹೋಟೆಲ್​ ಒಳಗೆ ಹರಿದ ಸಾಕ್ಸ್​ ಧರಿಸಿ, ಲ್ಯಾಪ್​ಟಾಪ್​ ಹಿಡಿದು ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಚರ್ಚಗೆ ಕಾರಣವಾಗಿದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಪ್ರಾಧ್ಯಾಪಕರಿಗೆ ಒಂದು ಜೊತೆ ಸಾಕ್ಸ್​ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಪ್ರಾಧ್ಯಾಪಕರು ಕೊಟ್ಟಿರುವ ಉತ್ತರ ಎಲ್ಲರ ಮೆಚ್ಚುಗೆಯನ್ನು ಪಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಾಧ್ಯಾಪಕ ಚೇತನ್​ ಸಿಂಗ್​ ಸೋಲಂಕಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಲಿಂಕ್​ಡಿನ್​ ಪೋಸ್ಟ್​ ಮೂಲಕ ತಮ್ಮದೇಯಾದ ವಿವರಣೆ ನೀಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಸೋಲಂಕಿ ಅವರು ಸುಮಾರು ಎರಡು ದಶಕಗಳಿಂದ ಪ್ರತಿಷ್ಠಿತ ಬಾಂಬೆ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಕಾಯುತ್ತಿರುವಾಗ ದೆಹಲಿಯ ಹಯಾತ್ ಹೋಟೆಲ್​ನಲ್ಲಿ ತೆಗೆದ ಫೋಟೋ ಇದಾಗಿದೆ. ಸೆ.25ರಂದು ಈ ಫೋಟೋವನ್ನು ಯಾರೋ ಒಬ್ಬರು ಸೆರೆಹಿಡಿದಿದ್ದಾರೆ ಎಂದು ಸೋಲಂಕಿ ತಿಳಿಸಿದ್ದಾರೆ. ಪ್ರಸ್ತುತ ಸೋಲಂಕಿ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದ್ದಾರೆ. ಸೌರಶಕ್ತಿಯನ್ನು ಉತ್ತೇಜಿಸಲು 20 ರಾಜ್ಯಗಳಲ್ಲಿ ಸುಮಾರು 43,000 ಕಿ.ಮೀ. ಪ್ರಯಾಣಿಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ತಮ್ಮ ಸಾಕ್ಸ್‌ಗಳನ್ನು ಬದಲಾಯಿಸುವುದು ಸುಲಭದ ಕೆಲಸವಾಗಿದ್ದರೂ, ತ್ಯಾಜ್ಯವನ್ನು ಆದಷ್ಟು ಕಡಿಮೆ ಮಾಡುವ ತಮ್ಮ ತತ್ವವನ್ನು ಅನುಸರಿಸಿರುವುದಾಗಿ ತಿಳಿಸಿದ್ದಾರೆ. ಹೌದು, ನನ್ನ ಹರಿದ ಸಾಕ್ಸ್​ ಬಹಿರಂಗವಾಗಿದೆ. ನಾನು ಅವುಗಳನ್ನು ಬದಲಿಸಬೇಕಿದೆ. ಖಂಡಿತ ಬದಲಿಸುತ್ತೇನೆ. ಬದಲಿಸಲು ನನ್ನಿಂದ ಸಾಧ್ಯ ಆದರೆ, ಪ್ರಕೃತಿಯಿಂದ ಸಾಧ್ಯವಿಲ್ಲ. ಈ ಪ್ರಕೃತಿಯಲ್ಲಿ ಎಲ್ಲವೂ ಸೀಮಿತವಾಗಿದೆ. ಹೀಗಾಗಿ ಯಾವುದೇ ವಸ್ತುಗಳನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಬಳಸಲು ನಾನು ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಸೋಲಂಕಿ ಅವರು ಹೇಳಿದ್ದಾರೆ.

ನನ್ನ ವೃತ್ತಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ನಾನು ಅತ್ಯುತ್ತಮ ಗ್ಯಾಜೆಟ್‌ಗಳನ್ನು ಬಳಸಬಹುದು ಆದರೆ, ನನ್ನ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ನಾನು ಕನಿಷ್ಟ ಪ್ರಮಾಣದ ವಸ್ತುಗಳನ್ನು ಬಳಸಲು ಆದಷ್ಟು ಪ್ರಯತ್ನಿಸುತ್ತೇನೆ ಎಂದು ಸೋಲಂಕಿ ತಿಳಿಸಿದರು. ಒಬ್ಬ ಉದ್ಯಮಿ ಹಣಕಾಸಿನ ಹೂಡಿಕೆಗಳ ಮೇಲಿನ ಲಾಭವನ್ನು ಹೆಚ್ಚಿಸಲು ಪ್ರಯತ್ನಿಸುವಂತೆಯೇ, ಸಾಮಾಜಿಕ ಕಾರ್ಯಕರ್ತನಾಗಿ ನನ್ನ ಸಮಯದ ಪರಿಣಾಮವನ್ನು ಹೆಚ್ಚಿಸುವ ಗುರಿಯನ್ನು ನಾನು ಹೊಂದಿದ್ದೇನೆ. ಸಾಧ್ಯವಾದಷ್ಟು ದೊಡ್ಡ ಬದಲಾವಣೆಯನ್ನು ಸೃಷ್ಟಿಸುತ್ತೇನೆ ಎಂದು ಸೋಲಂಕಿ ದೃಢಸಂಕಲ್ಪದಿಂದ ಲಿಂಕ್​ಡಿನ್​ನಲ್ಲಿ ಬರೆದುಕೊಂಡಿದ್ದಾರೆ.

IIT Bombay professor

ಇದೀಗ ಸೋಲಂಕಿ ಅವರ ಲಿಂಕ್​ಡಿನ್​ ಪೋಸ್ಟ್​ ಕೂಡ ವೈರಲ್​ ಆಗಿದ್ದು, ಅವರ ಮಾತುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ, ಅವರ ಹೇಳಿಕೆಯ ಮೇಲೆ ಚರ್ಚೆಯೂ ಶುರುವಾಗಿದೆ. ಸೋಲಂಕಿ ಅವರ ಮಾತುಗಳನ್ನು ಕೇಳಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net