

ರಮೇಶ್ ಮೈಸೂರು, ಬೆಂಗಳೂರು
ಶೈತ್ಯಾಗಾರದ ಅಗತ್ಯವಿಲ್ಲದೆ, ಸಹಜ ವಾತಾವರಣದಲ್ಲೂ ಶೇಖರಿಸಿಡಬಹುದಾದ, ಶಾಖವನ್ನು ತಡೆದುಕೊಳ್ಳುವ ಕೋವಿಡ್ ಲಸಿಕೆಯೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿ ಗಳು ಸಂಶೋಧಿಸಿದ್ದಾರೆ. ಇದು ಹಾಲಿ ಇರುವ ಕೋವಿಡ್ ವೈರಾಣುಗಳು ಮಾತ್ರ
ವಲ್ಲದೆ, ಭವಿಷ್ಯ ದಲ್ಲಿನ ರೂಪಾಂತರಿಗಳ ವಿರುದ್ಧವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲುದು ಎಂದು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದಿಂದಲೂ ಇಂಥದ್ದೊಂದು ಸಂಶೋಧನೆಯಲ್ಲಿ ಐಐಎಸ್ಸಿಯ ಮಾಲಿಕ್ಯೂಲರ್ ಬಯೋಫಿಸಿಕ್ಸ್ ಘಟಕದ ಪ್ರಾಧ್ಯಾಪಕ ರಾಘವ ವರದರಾಜನ್ ತೊಡಗಿಕೊಂಡಿದ್ದರು. ಎನ್ಪಿಜೆ ವ್ಯಾಕ್ಸಿನ್ ನಿಯತಕಾಲಿಕದಲ್ಲಿ ಈ ಕುರಿತ ಸಂಶೋಧನಾ ವರದಿ ಪ್ರಕಟವಾಗಿದೆ. ಕೋವಿಡ್ ಲಸಿಕೆಯಾಗಿ ಬಳಕೆಯಾಗಬಲ್ಲ ಕೃತಕ ಪ್ರತಿಜನಕ (ಸಿಂಥೆಟಿಕ್ ಆಂಟಿಜೆನ್) ರೂಪಿಸಿದ್ದು, ಇದು ಹಾಲಿ ಹಾಗೂ ಭವಿಷ್ಯದ ಕೋವಿಡ್ ರೂಪಾಂತರಿ ವೈರಸ್ಗಳ ವಿರುದ್ಧ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲುದು. ಜತೆಗೆ, ಇದನ್ನು ಅತ್ಯಂತ ತ್ವರಿತವಾಗಿ ಅಳವಡಿಸಿಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲಭ್ಯವಿರುವ ಲಸಿಕೆಗಳು ಸಾರ್ಸ್- ಸಿಒವಿ-2 (ಕೋವಿಡ್-19) ವೈರಸ್ ವಿರುದ್ಧ ಮಾತ್ರವೇ ಪರಿಣಾಮಕಾರಿಯಾಗಿವೆ. ಜತೆಗೆ, ಈ ವೈರಸ್ ರೂಪಾಂತರ ಹೊಂದಿದಂತೆಲ್ಲ ಇವುಗಳ ಕಾರ್ಯ ದಕ್ಷತೆಯೂ ಕಡಿಮೆಯಾಗುತ್ತದೆ. ವಿವಿಧ ವೈರಸ್ಗಳಲ್ಲಿ ಕಂಡುಬಂದ ಪ್ರೊಟೀನ್ಗಳನ್ನು ಅಧ್ಯಯನ ಮಾಡಿದ ಬಳಿಕ ವಿಜ್ಞಾನಿಗಳು ಕೋವಿಡ್-19ನ ಎರಡು ಪ್ರೊಟೀನ್ಗಳನ್ನು ಆಯ್ಕೆ ಮಾಡಿಕೊಂಡರು. ಎಸ್-2 ಸಬ್ನಿಟ್ ಹಾಗೂ ರಿಸೆಪ್ಟರ್ ಬೈಂಡಿಂಗ್ ಡೋಮೇನ್ (ಆರ್ಬಿಡಿ) ಎಂದು ಕರೆಯಲಾಗುವ ಪ್ರೊಟೀನ್ ಬಳಸಿ ಲಸಿಕೆ ಸಿದ್ಧಪಡಿಸಿದ್ದಾರೆ. ಎಸ್2 ಘಟಕವು ಎಸ್-1 ಘಟಕಕ್ಕಿಂತ ಕಡಿಮೆ ರೂಪಾಂತರಿಯಾಗಿದ್ದು, ಸದ್ಯದ ಎಲ್ಲ ಲಸಿಕೆಗಳು ಇದನ್ನೇ ಗುರಿಯಾಗಿಸಿಕೊಂಡಿವೆ. ಜತೆಗೆ, ಆರ್ಬಿಡಿ ಹೆಚ್ಚಿನ ಪ್ರತಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದರು. ಈ ಕಾರಣದಿಂದಾಗಿ ಇವೆರಡು ಅಂಶಗಳನ್ನು ಒಳಗೊಂಡ ಆರ್ಎಸ್2 ಎಂಬ ಹೈಬ್ರಿಡ್ ಪ್ರೊಟೀನ್ ಸಿದ್ಧಪಡಿಸಿದ್ದಾರೆ.
ಆರಂಭದಲ್ಲಿ ಇವುಗಳನ್ನು ಸಸ್ತನಿಗಳ ಜೀವಕೋಶದ ಮೇಲೆ ಪ್ರಯೋಗಿಸಲಾಯಿತು. ಈ ಹೈಬ್ರಿಡ್ ಪ್ರೊಟೀನ್ ಹೆಚ್ಚಿನ ಪ್ರತಿಸ್ಪಂದನೆ ತೋರಿತು. ಪ್ರಯೋಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದೇ ಆರಂಭದಲ್ಲಿ ಭಾವಿಸಿದ್ದಾಗಿ ಐಐಎಸ್ಸಿಯ ಸಂಶೋಧನಾರ್ಥಿ ನಿಧಿ ಮಿತ್ತಲ್ ಹೇಳುತ್ತಾರೆ. ಈ ಪ್ರೊಟೀನ್ನನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬಹುದು ಎಂಬುದು ಇದರಿಂದ ಗೊತ್ತಾಯಿತು ಎನ್ನುತ್ತಾರೆ.
ಸಸ್ತನಿಗಳ ಮೇಲೆ ಪ್ರಯೋಗ: ವಿಜ್ಞಾನಿಗಳು ಹೊಸದಾಗಿ ಸಂಶೋಧಿಸಿದ ಹೈಬ್ರಿಡ್ ಪ್ರೊಟೀನ್ನನ್ನು ಇಲಿ ಹಾಗೂ ಹೆಗ್ಗಣಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಈ ವೇಳೆ ಹೆಚ್ಚಿನ ಪ್ರತಿರೋಧಕ ಶಕ್ತಿ ಹಾಗೂ ಉಳಿದ ಪ್ರೊಟೀನ್ಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಂರಕ್ಷಣೆಯನ್ನು ನೀಡುತ್ತಿರುವುದು ಗೊತ್ತಾಗಿದೆ.
ಅತ್ಯಂತ ಮಿತವ್ಯಯ!: ಹೊಸ ಲಸಿಕೆಯ ವಿಶೇಷ ಗುಣವೆಂದರೆ ಇದನ್ನು ಸಾಮಾನ್ಯ ಕೊಠಡಿಯ ವಾತಾವರಣದಲ್ಲಿ ಒಂದು ತಿಂಗಳ ಕಾಲ ಶೇಖರಿಸಿ ಇಡಬಹುದು. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಗಳಿಗೆ ಶೈತ್ಯಾಗಾರದ ವ್ಯವಸ್ಥೆ ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ ಈ ಲಸಿಕೆಗಳ ಸಾಗಾಟ ಹಾಗೂ ದಾಸ್ತಾನು ಅತ್ಯಂತ ಮಿತವ್ಯಯಕಾರಿಯಾಗಿರಲಿದೆ. ಐಐಎಸ್ಸಿ ವಿಜ್ಞಾನಿಗಳ ತಂಡವು ಏಡ್ಸ್ ಹಾಗೂ ಇನ್ಫ್ಲುಯೆಂಜಾ ಕಾಯಿಲೆಗೂ ಲಸಿಕೆ ತಯಾರಿಯಲ್ಲೂ ತೊಡಗಿಕೊಂಡಿದೆ. ಈ ಅನುಭವವನ್ನೇ ಹೊಸ ಲಸಿಕೆ ತಯಾರಿಯಲ್ಲೂ ಬಳಸಿಕೊಂಡಿದೆ.
ಕೋವಿಡ್-19 ಹೊಸ ರೂಪಾಂತರಿಗಳಿಗೆ ಅನುಗುಣವಾಗಿ ಈ ಲಸಿಕೆಯನ್ನು ಸಿದ್ಧಪಡಿಸಬಹುದು. ಜತೆಗೆ, ಹೆಚ್ಚಿನ ಪ್ರತಿಸ್ಪಂದನೆ ಹಾಗೂ ಕೊಠಡಿ ತಾಪಮಾನವನ್ನು ತಾಳಿಕೊಳ್ಳಬಲ್ಲ ಗುಣದಿಂದಾಗಿ ಉತ್ಪಾದನೆ ಹಾಗೂ ಸಾಗಾಟದ ವೆಚ್ಚದಲ್ಲಿ ಭಾರಿ ಉಳಿತಾಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.