

ಬೆಂಗಳೂರು: ಇದೇ ವರ್ಷ ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರು ಹಬ್ಬ, ಹಾಗೂ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಫಾ) ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಐಾ ಪ್ರತಿನಿಧಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರು ಹಬ್ಬ ಹಾಗೂ ಐಫಾ ಪ್ರಶಸ್ತಿ ವಿತರಣೆ ಸಮಾರಂಭದ ಬಗ್ಗೆ ಐಫಾದವರ ಜತೆ ಚರ್ಚೆ ನಡೆಸಲಾಯಿತು.
ಒಂದಷ್ಟು ಕಾರ್ಯಕ್ರಮಗಳನ್ನು ಸಂಯೋಜಿಸಿ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಉತ್ತಮ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಆದ್ಯತೆ. ಜತೆಗೆ ಬೆಂಗಳೂರಿನ ಬಗ್ಗೆ ಮಹತ್ವ ನೀಡಬೇಕು ಎನ್ನುವುದು ನಮ್ಮ ಆಲೋಚನೆ ಎಂದರು.
ಈ ಹಿಂದೆ ರಾಜಸ್ಥಾನದಲ್ಲಿ ನಡೆದಿತ್ತು. ತೆಲಂಗಾಣದಲ್ಲಿ ಸೌಂದರ್ಯ ಸ್ಪರ್ಧೆ ಮಾಡುತ್ತಿದ್ದಾರೆ. ನಾವು ಇದನ್ನು ಮಾಡಲು ಹೋಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ಗಿಂತ ನಮ್ಮ ಸ್ಯಾಂಡಲ್ ವುಡ್ ಎತ್ತರಕ್ಕೆ ಹೋಗಿದೆ. ಇದಕ್ಕೆ ಉತ್ತೇಜನ ಕೊಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಕ್ಟೋಬರ್‌ನಲ್ಲಿ ದಸರಾವಿರುವ ಕಾರಣಕ್ಕೆ ಡಿಸೆಂಬರ್, ಜನವರಿಯಲ್ಲಿ ನಡೆಸಬಹುದು ಎಂದು ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಅವಕಾಶ ಸಿಗಲಿದೆ. ಮುಂಬೈ ಬಿಟ್ಟರೆ ಬೆಂಗಳೂರು ಇಂಥ ಕಾರ್ಯಕ್ರಮಗಳಿಗೆ ಸೂಕ್ತವೆಂದು ಆಯೋಜಕರು ತಿಳಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.