

ಕೋಲಾರ : ಎಲ್ಲ ಜಿಲ್ಲೆಗಳಲ್ಲೂ ವೃತ್ತಿಪರ ಕ್ರಿಮಿನಲ್‌ಗಳನ್ನು ಗುರುತಿಸಿ ಅವರ ಜಾಮೀನು ರದ್ದುಪಡಿಸುವುದು, ಜಾಮೀನು ಪಡೆದು ಕೋರ್ಟ್‌ಗೆ ಹಾಜರಾಗದಿರುವ ಪ್ರಕರಣದಲ್ಲಿ ಭದ್ರತೆ ನೀಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಬರೆದು ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹೇಳಿದರು.
ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿನ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿರುವ ಮಾಲುಗಳನ್ನು ಮಾಲೀಕರಿಗೆ ಹಿಂತಿರುಗಿಸುವ ಸಂಬಂಧ ನಗರದ ಡಿಎಆರ್ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸರು ಪರಿಸರ ಕಾಳಜಿ ವಹಿಸಬೇಕು. ಕಟ್ಟಡ ನಿರ್ಮಾಣದ ವೇಳೆ ಅನುಪಯುಕ್ತ ತ್ಯಾಜ್ಯಗಳನ್ನು ಕೆರೆ, ಕಾಲುವೆ ಬದಿ ವಿಲೇವಾರಿ ಮಾಡುತ್ತಿದ್ದಾರೆ, ಮಳೆಬಂದಾಗ ಕಲ್ಲು ಕಣ್ಣು ವಸತಿ ಪ್ರದೇಶಕ್ಕೆ ಬಂದು ಸಮಸ್ಯೆ ಗಂಭೀರವಾಗುತ್ತಿದೆ. ಇದನ್ನು ಪೊಲೀಸರು ತಡೆಯಬೇಕು ಎಂದರು.
ಪೊಲೀಸರೂ ಮನುಷ್ಯರೇ, ಇಲ್ಲಿಯವರೇ ಹೊರತು ಪಾಕ್, ಅಪ್ಘಾನ್‌ನಿಂದ ಬಂದವರಲ್ಲ, ನಮಲ್ಲೂ ತಪ್ಪುಗಳಾಗುತ್ತದೆ, ಸುಧಾರಣೆಗೆ ಅವಕಾಶ ಇದೆ. ತಪ್ಪು ಉದ್ದೇಶಪೂರ್ವಕವಾಗಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.ಕೋಲಾರ, ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಎಸ್ಪಿ ಸೇರಿ ಪೊಲೀಸ್ ಅಧಿಕಾರಿಗಳು ಹತ್ತು ಹಲವು ಕಳ್ಳತನ ಪ್ರಕರಣ ಬೇಧಿಸಿ ರಾಜ್ಯ, ಅಂತಾರಾಜ್ಯ ಚೋರರನ್ನು ಬಂಧಿಸಿರುವುದು ದೊಡ್ಡ ಸಾಧನೆ. ಅನೇಕ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಹಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪ್ರಸಂಶನಾ ಪತ್ರ, ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಮಾಲು ವಾಪಸ್: ಕೋಲಾರ ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ ವಿವಿಧ ಠಾಣೆಯಲ್ಲಿ ವರದಿಯಾಗಿರುವ ಕಳವು ಪ್ರಕರಣಗಳಲ್ಲಿ 76 ದ್ವಿಚಕ್ರ ವಾಹನ, ನಾಲ್ಕು ಚಕ್ರದ 3 ವಾಹನ, ಜೆಸಿಬಿ, ಆಟೋ, ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ. 36.67 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಒಡವೆ, 2.16 ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, 15.11 ಲಕ್ಷ ರೂ. ನಗದು ಹಾಗೂ ಇತರ 6.68 ಲಕ್ಷ ರೂ. ಮೌಲ್ಯದ ವಸ್ತುಗಳು ಸೇರಿ ಒಟ್ಟು 3.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಜಿಎಫ್ ಪೊಲೀಸ್ ಘಟಕದಲ್ಲಿ 45 ದ್ವಿಚಕ್ರ, ನಾಲ್ಕು ಚಕ್ರದ 1 ವಾಹನ, 37.38 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, 10 ಲಕ್ಷ ಮೌಲ್ಯದ ರಕ್ತಚಂದನ ಸೇಎಇ ಒಟ್ಟು 77.53 ಲಕ್ಷದ ಕಳವು ಮಾಲು ವಶಕ್ಕೆ ಪಡೆಯಲಾಗಿದೆ ಎಂದರು.
ಎಸ್ಪಿ ಡೆಕ್ಕಾ ಕಿಶೋರ್‌ಬಾಬು ಹಾಜರಿದ್ದರು
ಯಾವುದೇ ಆದೇಶ ಆಗಿಲ್ಲ : ಪೊಲೀಸ್ ಇಲಾಖೆಯಲ್ಲಿ ಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ತೆರವಾದ ಹುದ್ದೆಗಳಿಗೆ ನಿಯೋಜಿಸಲಾಗುವುದು. ಇನ್‌ಸ್ಪೆಕ್ಟರ್‌ಗಳ ನೇಮಕಾತಿ ನಡೆದು ಅನೇಕರು ಜಿಲ್ಲಾಮಟ್ಟದ ತರಬೇತಿಯಲ್ಲಿದ್ದಾರೆ. ಮುಗಿದ ಕೂಡಲೇ ನಿಯೋಜಿಸಲಾಗುವುದು. ಕೆಜಿಎಫ್ ಎಸ್ಪಿ ಹುದ್ದೆ ಖಾಲಿ ಇದೆ, ಸದ್ಯಕ್ಕೆ ಹುದ್ದೆ ಇದೆ. ಎಸ್ಪಿ ಕಚೇರಿ ಸ್ಥಳಾಂತರದ ಬಗ್ಗೆ ಜನರು ಗೊಂದಲ ಮಾಡಿಕೊಂಡಿರಬಹುದು, ಸ್ಥಳಾಂತರದ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಆಗಿಲ್ಲ ಎಂದು ಐಜಿಪಿ ಚಂದ್ರಶೇಖರ್ ತಿಳಿಸಿದರು.