

ತೀರ್ಥಹಳ್ಳಿ: ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲುವಷ್ಟು ಕನ್ನಡ ಸಮರ್ಥವಾಗಿದ್ದರೂ ಪರಭಾಷೆಯ ವ್ಯಾಮೋಹದಿಂದ ಕನ್ನಡಿಗರು ಮಾತೃಭಾಷೆಯನ್ನೇ ಕಡೆಗಣಿಸುವ ಮನೋಭಾವ ಹೊಂದಿರುವುದು ವಿಷಾದನೀಯ ಸಂಗತಿ ಎಂದು ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸಾನಿಕಾ ಎಂ. ಹೆಗಡೆ ಹೇಳಿದರು.
ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಪರಭಾಷಾ ವ್ಯಾಮೋಹದಿಂದ ಮಾತೃಭಾಷೆ ಕಡೆಗಣಿಸುವ ಮನೋಭಾವವನ್ನು ನಾವು ತೊರೆಯಬೇಕಿದೆ. ಕನ್ನಡ ಶ್ರೀಮಂತವಾಗಿರುವ ಕಾರಣದಿಂದಲೇ ನಮಗೆ ಎಂಟು ಜ್ಞಾನಪೀಠ ಪುರಸ್ಕಾರಗಳು ದೊರೆತಿರುವುದು ಎಂದು ಪ್ರತಿಪಾದಿಸಿದರು.
ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸುವ ಮೊಬೈಲ್ ಬಳಕೆ ಮುಂತಾದವುಗಳಿಗೆ ಕಡಿವಾಣ ಹಾಕುವ ಮೂಲಕ ಸಾಹಿತ್ಯ, ಸಂಗೀತ, ಕಲೆಗಳೂ ಸೇರಿದಂತೆ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಸಮ್ಮೇಳನ ಉದ್ಘಾಟಿಸಿದ ಡಿ.ರಜತಾ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡವೇ ಯಜಮಾನಿಯಾಗಿದ್ದು ಇಂಗ್ಲಿಷ್ ಸೇರಿದಂತೆ ಉಳಿದ ಎಲ್ಲ ಭಾಷೆಗಳು ಒಕ್ಕಲುಗಳಂತೆ. ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದರು.
ಅತಿಥಿಯಾಗಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಮಹಾನ್ ವ್ಯಕ್ತಿಗಳು ಜನಿಸಿದ ಈ ಮಣ್ಣಿನಲ್ಲಿ ವಿಶೇಷ ಶಕ್ತಿ ಇದೆ. ಎಳೆಯ ಪ್ರತಿಭೆಗಳಲ್ಲಿರುವ ಸೃಜನಶೀಲತೆಯನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ಪೂರಕ. ವಿದ್ಯಾರ್ಥಿಗಳಲ್ಲಿ ಓದುವ ಮನೋಭಾವ ಮೂಡಿಸುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಸಾಹಿತ್ಯ ಚಟುವಟಿಕೆಗಳು ಇತರರಿಗೆ ಮಾದರಿಯಾಗಿವೆ. ಇಂತಹ ಸಮ್ಮೇಳನಗಳ ಲವಾಗಿ ಹಲವು ಯುವ ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಚಿರಾಗ್ ಪಟವರ್ಧನ್, ಸಾಹಿತಿ ಎಂ.ನವೀನ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ತಾಪಂ ಇಒ ಶೈಲಾ, ಬಿಇಒ ವೈ.ಗಣೇಶ್, ಸರ್ಕಾರಿ ಬಾಲಿಕಾ ಪ್ರೌಢಶಾಲೆ ಉಪಪ್ರಾಚಾರ್ಯ ಪಿ.ಎಚ್.ನಾಗಪ್ಪ, ತಾಲೂಕು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಣುಕಾ ಎಂ. ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲ ಹೆಗಡೆ ಇದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕುಶಾವತಿಯಿಂದ ನಡೆದ ಭುವನೇಶ್ವರಿ ದೇವಿ ಮೆರವಣಿಗೆಯಲ್ಲಿ ಕನ್ನಡ ನಾಡಿನ ವೀರರು, ಇತಿಹಾಸ ಪುರುಷರ ಛದ್ಮವೇಷಗಳು ಗಮನ ಸೆಳೆದವು. ಸಮ್ಮೇಳನದಲ್ಲಿ ಮಕ್ಕಳಿಂದ ಕಾವ್ಯ ಕಲರವ, ಕಥಾಗೋಷ್ಠಿ ಮತ್ತು ಪ್ರಬಂಧ ಗೋಷ್ಠಿಗಳು ನಡೆದವು.