

ನವದೆಹಲಿ: ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿಗೆ ಪ್ರವೇಶಿಸಲು ಸ್ವತಂತ್ರರು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಮಂಡಳಿ, ಇಸ್ಲಾಂ ಧರ್ಮ ಮಹಿಳೆಯನ್ನು ಮಸೀದಿ ಪ್ರವೇಶಿಸಲು ತಡೆಯುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಫತ್ವಾಗಳನ್ನು ಬಿಟ್ಟುಬಿಡಿ. ಆದರೆ ಪುರುಷರಂತೆ ಮಹಿಳೆಯರು ಶುಕ್ರವಾರ ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಒತ್ತಿ ಹೇಳಿದೆ.
ಮಹಾರಾಷ್ಟ್ರ ಮೂಲದ ದಂಪತಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ನ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಅರ್ಜಿಯಲ್ಲಿ ಮುಸ್ಲಿಂ ಮಹಿಳೆಯರು ಮಸೀದಿಯನ್ನು ಪ್ರವೇಶಿಸಬೇಕೇ ಬೇಡವೇ ಎಂದು ನಿರ್ಣಯಿಸಲು ಕೇಳಿ ಕೊಳ್ಳಲಾಗಿತ್ತು. ಜತೆಗೆ ಇದು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದಂತೆ. ಅಲ್ಲದೆ, ಇದು ಮೂಲ ಹಕ್ಕುಗಳ ಉಲ್ಲಂಘನೆಯೂ ಹೌದು ಎಂದು ಹೇಳಲಾಗಿತ್ತು.
ಜಮಾತ್ ಎ ಇಸ್ಲಾಮಿ ಮತ್ತು ಮುಜಾಹಿದ್ ಪಂಗಡಗಳು ಮಾತ್ರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತವೆ. ಆದರೆ ಅದೂ ಬೇರೆ ಬೇರೆ ದ್ವಾರಗಳ ಮೂಲಕ ಪ್ರವೇಶಿಸುವ ನಿರ್ಬಂಧವಿದೆ ಎಂದು ಅರ್ಜಿಯಲ್ಲಿ ಅಪಾದಿಸಲಾಗಿತ್ತು. (ಏಜೆನ್ಸೀಸ್)