

ಸಾಧನೆಯಂದರೆ ನಮ್ಮೊಳಗೆ ನಾವಿಳಿಯುವುದು. ನಮ್ಮನ್ನೇ ನಾವು ನೋಡುವುದು, ಅಲ್ಲಿರುವ ಆನಂದವನ್ನು ಆನಂದಿಸುವುದು, ಅದರೊಂದಿಗೆ ಒಂದಾಗಿರುವುದು. ಅದನ್ನು ನೋಡುವ ಸರಿಯಾದ ಮಾರ್ಗ ನಮ್ಮಲ್ಲಿ ಇಲ್ಲದ ಕಾರಣ ಅದು ಖಾಲಿಯಾಗಿ ಕಾಣುತ್ತಿದೆ. ನಾವು ಅದನ್ನು ಮನಸ್ಸಿನ ಮೂಲಕ ನೋಡುತ್ತೇವೆ; ನಾವು ಮನಸ್ಸನ್ನು ಬದಿಗೆ ಇಟ್ಟು ನಮ್ಮನ್ನೇ ನಾವು ನೋಡಿದರೆ, ಆಗ ಅರಿವಾಗುತ್ತದೆ. ಅದು ಅಪಾರ ಸೌಂದರ್ಯವನ್ನು ಹೊಂದಿದೆ, ಅದು ದೈವಿಕವಾಗಿದೆ, ಅದು ಆನಂದದಿಂದ ತುಂಬಿದೆ, ಅಲ್ಲಿ ಬೇರೆ ಏನೂ ಬೇಕಾಗಿಲ್ಲ ಎಂದು. ಅಂತಹ ಸಂದರ್ಭದಲ್ಲಿ ಮಾತ್ರ ವ್ಯಕ್ತಿಯು ಹಣದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತಾನೆ. ಅಧಿಕಾರದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತಾನೆ.
ಸ್ವರ್ಗದ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತಾನೆ. ಏಕೆಂದರೆ ಅವನು ಈಗಾಗಲೇ ಸ್ವರ್ಗದಲ್ಲಿರುತ್ತಾನೆ, ಶ್ರೀಮಂತನಾಗಿರುತ್ತಾನೆ, ಶಕ್ತಿಶಾಲಿಯಾಗಿರುತ್ತಾನೆ. ಜನರು ನಿರಂತರವಾಗಿ ಹಣ ಮತ್ತು ಹಣದ ಬಗ್ಗೆ ಯೋಚಿಸುತ್ತಿರುತ್ತಾರೆ. ಈ ರೋಗದಿಂದ ಹೊರಬರಬೇಕಾಗಿದೆ. ಈ ಕ್ಷಣದಲ್ಲಿ ಜೀವಿಸಲು ಆರಂಭಿಸಿದಲ್ಲಿ, ಭವಿಷ್ಯವನ್ನು ಬಿಟ್ಟುಬಿಟ್ಟಲ್ಲಿ, ಹಣವು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಈಗ ಬದುಕುತ್ತಿರುವ ಕ್ಷಣವೇ ಕೊನೆಯ ಕ್ಷಣ ಎಂಬಂತೆ ಬದುಕಿದಲ್ಲಿ ಹಣ ಮತ್ತು ಅಧಿಕಾರಕ್ಕಾಗಿರುವ ಎಲ್ಲ ಬಯಕೆ ನಮ್ಮನ್ನು ಬಿಟ್ಟುಹೋಗುತ್ತದೆ.