ಕನ್ನಡ ಮಾತನಾಡಿದರೆ ದಂಡ ಸೂಕ್ತವಲ್ಲ

kannada
ಕೊಪ್ಪ-ಮಳ್ಳ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಎಸ್.ನಟರಾಜ್ ಉದ್ಘಾಟಿಸಿದರು. ನ್ಯಾಯಾಧೀಶ ಎಂ.ವಿ.ಮಾದೇಶ್, ಎಂ.ಎಸ್.ಗೌಡರ್, ಕೆ.ವಿ.ಪ್ರವೀಣ್ ಇತರರಿದ್ದರು.
Published on

ತ್ಯಾಗರ್ತಿ: ಕೆಲವು ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿಸಿ, ಬೆಳೆಸಲು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂದು ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ಎಸ್.ನಟರಾಜ್ ತಿಳಿಸಿದರು.

ಇಲ್ಲಿನ ಕೊಪ್ಪ-ಮಳ್ಳ ಗ್ರಾಮದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೊಪ್ಪ, ಕಾಗೋಡುದಿಂಬ, ಮಳ್ಳ, ನಾರಗೋಡು ಗ್ರಾಮಸ್ಥರಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕನ್ನಡ ಮಾತನಾಡುವುದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತದೆ. ಇಂಗ್ಲಿಷ್ ಮಾತನಾಡುವಂತೆ ಪಾಲಕರು ಸಹ ಮಕ್ಕಳಿಗೆ ಒತ್ತಡ ಹಾಕುತ್ತಾರೆ. ಕನ್ನಡ ಭಾಷೆ ಬೆಳೆಸಲು ನಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು. ಆಂಗ್ಲ ಭಾಷೆಯನ್ನು ವ್ಯವಹಾರಕ್ಕೆ ಬಳಸಿಕೊಂಡು ಮಾತೃಭಾಷೆ ಕನ್ನಡವನ್ನು ಬೆಳೆಸಬೇಕು ಎಂದರು.

ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು. ಮದ್ಯಪಾನ ಮತ್ತಿತರ ದುಶ್ಚಟಗಳನ್ನು ತೊರೆದವರನ್ನು ಸನ್ಮಾನಿಸುವ ಉತ್ತಮ ಕೆಲಸ ಈ ವೇದಿಕೆಯಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ ಸಂಗತಿ. ಮದ್ಯಪಾನ ಕುಟುಂಬದ ಶಾಂತಿಯನ್ನು ನಾಶ ಮಾಡುತ್ತದೆ. ಮದ್ಯಪಾನದಿಂದ ದೂರವಿದ್ದು ಸನ್ಮಾರ್ಗಯುತ ಬದುಕು ನಡೆಸಿ ಎಂದು ಸಲಹೆ ನೀಡಿದರು.

ಹಿರಿಯ ವಕೀಲ ಎಂ.ಎಸ್.ಗೌಡರ್ ಮಾತನಾಡಿ, ತಾಲೂಕಿನ ಕೆಲವು ಭಾಗಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವ ಕೆಟ್ಟ ಪದ್ಧತಿ ಜೀವಂತವಾಗಿದೆ. ಇದು ಆ ಇಡೀ ಕುಟುಂಬವನ್ನು ಖಿನ್ನತೆಗೆ ಒಳಪಡಿಸುತ್ತದೆ. ಬಹಿಷ್ಕಾರ ಪದ್ಧತಿ ಒಂದರ್ಥದಲ್ಲಿ ಸಿವಿಲ್ ಡೆತ್ ಇದ್ದಂತೆ. ಮಲೆನಾಡಿನ ಹಳ್ಳಿಗಳಲ್ಲಿ ಇಂದಿಗೂ ಪದ್ಧತಿ ಜಾರಿಯಲ್ಲಿರುವುದು ನಾಗರಿಕ ಸಮಾಜ ನಾಚಿಕೆಪಡುವಂತೆ ಆಗಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ಕಾನೂನು ಸೇವಾ ಸಮಿತಿಗೆ ದೂರು ನೀಡಿದರೆ ನ್ಯಾಯ ದೊರಕಿಸಿಕೊಡುತ್ತದೆ ಎಂದರು.

ಪ್ರಧಾನ ವ್ಯವಹಾರ ನ್ಯಾಯಾಧೀಶ ಎಂ.ವಿ.ಮಾದೇಶ್, ಸರ್ಕಾರಿ ಅಭಿಯೋಜಕ ಚಂದ್ರಶೇಖರ್, ಸಾಗರ ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗರಾಜ್, ವಕೀಲ ಕೆ.ವಿ.ಪ್ರವೀಣ್, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಪಿಡಿಒ ಅಸ್ಪಾಕ್ ಅಹ್ಮದ್ ಕುಮಾರಸ್ವಾಮಿ, ರಾಜೇಂದ್ರ ಆವಿನಹಳ್ಳಿ ಇತರರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ ಮದ್ಯಪಾನ ತ್ಯಜಿಸಿದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net