ಅಪಾಯಕಾರಿ ಡೆಂಘೆ ಕಾರುಗಳು ಕಂಡರೇ; ಕೂಡಲೆ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ

car
Published on

ಬೆಂಗಳೂರು: ನಗರದಲ್ಲಿ ರಸ್ತೆಬದಿ, ಮನೆ ಮುಂದೆ, ಗ್ಯಾರೇಜ್ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ತಿಂಗಳುಗಟ್ಟಲೆ ನಿಂತಿರುವ ಕಾರುಗಳು ಸೊಳ್ಳೆ ಆವಾಸ ಸ್ಥಾನವಾಗಿದೆ. ಡೆಂಘೆ ಜ್ವರ ಹೆಚ್ಚಳಕ್ಕೂ ಇದು ಕಾರಣವಾಗಿದ್ದು, ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಎಚ್ಚರಗೊಳ್ಳಬೇಕಾಗಿದೆ.

ಅಪಘಾತಕ್ಕೆ ಒಳಗಾಗಿ, ರಿಪೇರಿಯಾಗಿ, ಹಳೆಯ ವಾಹನಗಳು ನಗರದ ರಸ್ತೆಬದಿ ಮತ್ತು ಮನೆ ಮುಂಭಾಗ ಸಾಕಷ್ಟು ಕಡೆಗಳಲ್ಲಿ ತಿಂಗಳುಗಟ್ಟಲೆ ನಿಲ್ಲಿಸಲಾಗಿದೆ. ಮಳೆಗಾಲವಾದ ಕಾರಣ ಅದರ ಒಳಗೆ ನೀರು ತುಂಬಿಕೊಂಡು ಸೊಳ್ಳೆ ಆವಾಸ ಸ್ಥಾನವಾಗುತ್ತಿವೆ. ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಡೆಂಘೆ ತಡೆಗಟ್ಟುವ ಅಭಿಯಾನದ ಭಾಗವಾಗಿ ಹೂವಿನ ಕುಂಡಗಳು, ಟ್ಯಾಂಕ್‌ಗಳು, ಟೆರೇಸ್‌ಗಳು ಮತ್ತು ಚರಂಡಿಗಳ ಮೇಲೆ ಅಧಿಕಾರಿಗಳು ನಿಗಾ ವಹಿಸುತ್ತಾರೆ. ಆದರೆ, ಈ ಸ್ಥಳಗಳಲ್ಲಿ ಮತ್ತು ದಿನಗಟ್ಟಲೆ ನಿಲ್ಲಿಸಿರುವ ವಾಹನಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಡುತ್ತಿರುವ ಬಗ್ಗೆ ಅಧಿಕಾರಿಗಳು ಗಮನ ಕೊಡಬೇಕಾಗಿದೆ.

ಅಪರಾಧ ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆಯುವ ವಾಹನಗಳನ್ನು ಠಾಣೆ ಆವರಣದಲ್ಲಿ ನಿಲ್ಲಿಸಿರುತ್ತಾರೆ. ಅಂತಹ ವಾಹನಗಳಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣ ಆಗಬಹುದು. ಕೋರ್ಟ್ ಅನುಮತಿ ಪಡೆದು ವಿಲೇವಾರಿ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕರೆ ಮಾಡಿ ದೂರು ನೀಡಿ

ವಾರಗಟ್ಟಲೆ ನಿಂತಿರುವ ಅಪರಿಚಿತ ವಾಹನಗಳ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಬಹುದು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸ್ಥಳೀಯರ ಅಭಿಪ್ರಾಯ ಪಡೆದು ಜಪ್ತಿ ಮಾಡಿ ಹಳೆಯ ವಾಹನಗಳನ್ನು ನಿಲ್ಲಿಸಲು ತೆರೆದಿರುವ ಯಾರ್ಡ್‌ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net