

ಮದ್ದೂರು: ಶೈಕ್ಷಣಿಕ ವಲಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಹೆಚ್ಚಿನ ಸೌಲಭ್ಯಗಳನ್ನು ಸಂಘ ಸಂಸ್ಥೆಗಳು ಒದಗಿಸಿಕೊಟ್ಟರೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಟಾರ್ ಚಂದ್ರು ಅವರ ಅಭಿಮಾನಿ ಕೆ.ಸಿ.ನಿರಂಜನ್ ತಿಳಿಸಿದರು.
ತಾಲೂಕಿನ ನಿಲುವಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು ಜನ್ಮದಿನದ ಅಂಗವಾಗಿ ಅಭಿಮಾನಿ ಕೆ.ಸಿ.ನಿರಂಜನ್ ಇಬ್ಬರು ವಿದ್ಯಾರ್ಥಿಗಳಿಗೆ 12 ಸಾವಿರ ರೂ. ಮೌಲ್ಯದ ಉಚಿತ ಬೈಸಿಕಲ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಮಂಗಳವಾರ ವಿತರಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಸಿಕೊಳ್ಳಬೇಕೆಂದು ಹೇಳಿದರು.
ಮುಖ್ಯಶಿಕ್ಷಕ ಎಚ್.ಎಸ್.ರವೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆಗೆ ಹಲವು ಸಮಸ್ಯೆಗಳಿದ್ದು ಸರ್ಕಾರದ ಸೌಲಭ್ಯಗಳ ಜತೆಗೆ ಸ್ಮಾರ್ಟ್ ತರಗತಿಗಳು, ಸ್ಪೋಕನ್ ಇಂಗ್ಲಿಷ್ ಸೇರಿದಂತೆ ಹೆಚ್ಚಿನ ಶೈಕ್ಷಣಿಕ ಸೌಕರ್ಯಗಳ ಅವಶ್ಯಕತೆ ಇದೆ. ಎಲ್ಲರೂ ಕೈ ಜೋಡಿಸಿದರೆ ವಿದ್ಯಾರ್ಥಿಗಳ ಉತ್ತಮ ಪ್ರಗತಿ ಕಾಣಬಹುದು ಎಂದರು.
ಸ್ಟಾರ್ ಗ್ರೂಪ್‌ನ ಸಚಿನ್, ಸಹ ಶಿಕ್ಷಕರಾದ ಎಂ.ಪಿ.ಮಹೇಶ್, ಲಕ್ಷ್ಮೀಪತಿ, ಸುಕನ್ಯಾ, ಶೋಭಾ, ಶುಭಶ್ರೀ ಇದ್ದರು.