

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಹೊಸ ಚಾಲೆಂಜ್ವೊಂದನ್ನು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸ್ಪರ್ಧೆಗಳಿದು, ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಡಳಿತ ಹಂಚಿಕೆಗೆ ಬೇಡಿಕೆಯಿಟ್ಟು, ಅದಕ್ಕೆ ಬಿಜೆಪಿ ಒಪ್ಪದೆ ಇದ್ದಿದ್ದಕ್ಕೆ ಶಿವಸೇನೆ ಮೈತ್ರಿಯನ್ನೇ ಮುರಿದುಕೊಂಡಿದ್ದು, ನಂತರ ಕಾಂಗ್ರೆಸ್, ಎನ್ಸಿಪಿ ಜತೆ ಸೇರಿ ಮಹಾವಿಕಾಸ ಅಘಾಡಿ ಸರ್ಕಾರ ರಚಿಸಿದ್ದು ಹಳೇ ಕತೆ.
ಈಗ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಉದ್ಧವ್ ಠಾಕ್ರೆಯವರ ಬಳಿ ಹೊಸದಾಗಿ ಜನರ ಆದೇಶ ಪಡೆಯುವಂತೆ ಸವಾಲು ಹಾಕಿದ್ದಾರೆ.
ಸಾಧ್ಯವಾದರೆ ನಮ್ಮ ಸರ್ಕಾರವನ್ನು ಉರುಳಿಸಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ಆದರೆ ನಾವು ಯಾವುದೇ ಸರ್ಕಾರವನ್ನೂ ಕೆಡವಲು ಮುಂದಾಗುವುದಿಲ್ಲ. ಅಂತಹ ಕನಸು, ಆಸೆಗಳೂ ನಮಗಿಲ್ಲ. ಆದರೆ ಅದರ ಬದಲಿಗೆ ನಾನೂ ಒಂದು ಚಾಲೆಂಜ್ ಮಾಡುತ್ತೇನೆ. ನಿಮಗೆ ತಾಕತ್ತಿದ್ದರೆ ಮತ್ತೊಮ್ಮೆ ಚುನಾವಣೆ ನಡೆಸಿ. ಹೊಸದಾಗಿ ಜನರ ಆದೇಶ ಪಡೆಯಿರಿ ಎಂದು ಫಡ್ನವೀಸ್ ಹೇಳಿದ್ದಾರೆ. ಅಷ್ಟೇ ಅಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಮಹಾರಾಷ್ಟ್ರ ಜನರು ಮತ ಹಾಕಿದ್ದಾರೆಯೇ ಎಂಬುದನ್ನು ಮೊದಲು ಪರಿಶೀಲನೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಮತ್ತೊಮ್ಮೆ ಚುನಾವಣೆಯಾಗಲಿ. ಕಾಂಗ್ರೆಸ್-ಎನ್ಸಿಪಿ- ಶಿವಸೇನಾ ಮೈತ್ರಿ ಮಾಡಿಕೊಂಡೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ. ಅವರ ವಿರುದ್ಧ ಬಿಜೆಪಿ ಏಕಾಂಗಿ ಹೋರಾಟ ಮಾಡಲು ಸಿದ್ಧವಿದೆ. ತಕ್ಕ ಉತ್ತರವನ್ನೂ ನೀಡಲಿದೆ ಎಂದಿದ್ದಾರೆ.
ಈಗೆರಡು ದಿನಗಳ ಹಿಂದೆ ಉದ್ಧವ್ ಠಾಕ್ರೆಯವರು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡುತ್ತ, ನಾನು ಶಿವಸೇನೆಯ ಸಂಸ್ಥಾಪಕ ಬಾಳ್ ಠಾಕ್ರೆಯವರ ಪುತ್ರ. ನನ್ನ ತಂದೆ ಯಾವಾಗಲೂ ಸವಾಲುಗಳನ್ನು ಹಾಕುತ್ತಿದ್ದರು ಹಾಗೂ ಯಾರಾದರೂ ಸವಾಲು ಹಾಕಿದರೆ ಅದನ್ನು ಸ್ವೀಕರಿಸಿ ಗೆಲ್ಲುತ್ತಿದ್ದರು. ನಾನೂ ಕೂಡ ಅವರಂತೆಯೇ.
ಬಿಜೆಪಿಗೆ ಹೇಗೂ ಆಪರೇಶನ್ ಕಮಲ ಹೊಸದಲ್ಲ. ಈಗಲೂ ಅಷ್ಟೇ ಅದೇ ಪದ್ಧತಿಯಿಂದ ಸಾಧ್ಯವಾದರೆ ನಮ್ಮ ಸರ್ಕಾರವನ್ನು ಉರುಳಿಸಲಿ. ಇದು ನನ್ನ ಚಾಲೆಂಜ್ ಎಂದು ಹೇಳಿದ್ದರು. ಅದಕ್ಕೆ ಫಡ್ನವೀಸ್ ಮರು ಸವಾಲು ಹಾಕಿದ್ದಾರೆ. (ಏಜೆನ್ಸೀಸ್)