

ಶಿವಮೊಗ್ಗ: ಶಿಕ್ಷಕರು ಮತ್ತು ಪಾಲಕರ ಮಾತನ್ನು ಪಾಲಿಸುವುದರಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಹೊಂದಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪಿಯು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಪಿಯು ವಿಜ್ಞಾನ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪರಿಚಯ ಹಾಗೂ ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ದಿನಚರಿ ಪಟ್ಟಿ ಇರಿಸಿಕೊಳ್ಳಬೇಕು. ಹೆಚ್ಚು ಅಂಕ ಪಡೆದ ಸಹಪಾಠಿಗಳ ಓದಿನ ಕ್ರಮ ಅರಿತು ಅಳವಡಿಸಿಕೊಳ್ಳಬೇಕು. ಓದುವಾಗ ಏಕಾಗ್ರತೆ ಇರಬೇಕು. ವಿದ್ಯಾರ್ಥಿಗಳು 8 ಗಂಟೆ ನಿದ್ರೆ ಮಾಡಬೇಕು. ಪಾಲಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು ಎಂದರು.
ಟ್ರಸ್ಟ್‌ನ ಶೈಕ್ಷಣಿಕ ಸಲಹೆಗಾರ ವಿಜಯವಾಮನ್ ಮಾತನಾಡಿ, ಬದುಕು ನೀಡಿದ ಪಾಲಕರ ರಕ್ಷಣೆ ಹಾಗೂ ಪೋಷಣೆ ನಿಮ್ಮ ಮೇಲಿದೆ. ಅದನ್ನು ಚಾಚೂ ತಪ್ಪದೇ ಮಾಡಬೇಕು. ಆದರೆ ಆಧುನಿಕ ಬದುಕಿನ ಶೈಲಿಯಿಂದ ಎಷ್ಟೋ ಪಾಲಕರು ವೃದ್ಧಾಶ್ರಮ ಸೇರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತೀರ್ಥಹಳ್ಳಿ ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗೆರೆ ಮಾತನಾಡಿ, ಇಂದು ಶಿಕ್ಷಣ ಕೇವಲ ಕಲಿಕೆಯಾಗದೆ ಸಂಸ್ಕಾರ ಹಾಗೂ ಸಂಸ್ಕೃತಿ ಬಿಂಬಿಸುವ ಅಂಶವಾಗಬೇಕಿದೆ ಎಂದರು.
ಶ್ರೀ ಆದಿಚುಂಚನಗಿರಿ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ವಿ.ಗುರುರಾಜ್, ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಎಚ್.ಸುರೇಶ್ ಉಪಸ್ಥಿತರಿದ್ದರು.