ಕರೆಯೋ ರೀತಿ ಕರೆದರೆ, ತಾಯಿ ಹೇಗೆ ತಾನೆ ಸುಮ್ಮನಿರುವಳು?

-68d57b2af1fe7
Published on
ಜಗಜ್ಜನನಿಯನ್ನು ಹೃದಯಾಂತರಾಳದಿಂದ ಕರೆಯಬೇಕು ಎಂದು ಬೋಧಿಸಿದವರು ಭಗವಾನ್ ಶ್ರೀ ರಾಮಕೃಷ್ಣ ಪರಮ ಹಂಸರು. ಪರಮಹಂಸರ ವೈಶಿಷ್ಟ್ಯವೇನೆಂದರೆ ಮೃಣ್ಮಯಿಯಲ್ಲಿ ಸದಾ ಚಿನ್ಮಯಿಯನ್ನು ಕಾಣುತ್ತಿದ್ದರು. ಆದರೆ ನಾವು ನಿಜವಾದ ರೀತಿಯಲ್ಲಿ ಭಗವತಿಯ ಮೇಲೆ ಶುದ್ಧ ಭಕ್ತಿ, ಶುದ್ಧ ಮನಸ್ಸು, ಶುದ್ಧ ಹೃದಯದಿಂದ ಪೂಜಿಸಿ, ಪ್ರಾರ್ಥಿಸುತ್ತಿದ್ದೇವೆಯೇ? ಇದಕ್ಕೆ ಉತ್ತರ ಖಂಡಿತವಾಗಿಯೂ ಇಲ್ಲ! ಎಂಬಂತೆ ಉತ್ತರ ಸದಾ ಬರುತ್ತದೆ.

ಕಾರಣ, ನಮಗೆ ಭಗವತಿಯು ನಿಜವಾಗಿಯೂ ಇದ್ದಾಳೆಯೇ? ಅವಳು ನಮ್ಮ ಹೃದಯದ ಮೊರೆಯನ್ನು ಆಲಿಸುತ್ತಿದ್ದಾಳೆಯೇ ಎಂಬ ನಂಬಿಕೆಯಿಲ್ಲದೆ ಕೇವಲ ತೋರ್ಪಡಿಕೆಗೆ, ಪ್ರದರ್ಶನಕ್ಕೆ ಮತ್ತು ಸ್ವಾರ್ಥದಿಂದ ಕೇವಲ ಜಗಜ್ಜನನಿಯ ಬಳಿ ಪ್ರಾಪಂಚಿಕ ಆಸೆಗಳ ರಾಶಿ ರಾಶಿ ನಿವೇದನೆಗಳನ್ನು ಮಾಡುತ್ತೇವೆ. ಬಿನ್ನಹಗಳ ಸುರಿಮಳೆಯನ್ನೇ ಸುರಿಸುತ್ತೇವೆ. ಆದರೆ ಭವತಾರಿಣಿಯ ಬಳಿ ಏನು ಪ್ರಾರ್ಥಿಸಬೇಕೋ ಅದನ್ನು ಬಿಟ್ಟು ಬೇರೆಲ್ಲ ವಿಷಯ, ಸಾಂಸಾ ರಿಕ ಆಸೆ, ಆಕಾಂಕ್ಷೆಗಳ ಬೆಟ್ಟವನ್ನೇ ಇರಿಸುತ್ತೇವೆ. ರಾಮಕೃಷ್ಣರು ಪ್ರಾರ್ಥಿಸಿದಂತೆ ಒಂದು ಕ್ಷಣವಾದರೂ ಆ ಜಗನ್ಮಾತೆಯಲ್ಲಿ ಪ್ರಾರ್ಥಿಸುತ್ತೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ಪರಮಹಂಸರು ನೀಡಿದ ಉದಾಹರಣೆಯನ್ನು ಇಲ್ಲಿ ಗಮನಿಸಬಹುದು. ಒಂದು ಮಗುವಿಗೆ ತಾಯಿ ಅನೇಕಾನೇಕ ಆಟಿಕೆ ಸಾಮಾನುಗಳನ್ನು ಇರಿಸಿ ತನ್ನ ಕೆಲಸದಲ್ಲಿ ಮಗ್ನಳಾಗು ತ್ತಾಳೆ. ಮಗು ಸ್ವಲ್ಪ ಸಮಯ ಆ ಆಟದ ಗೊಂಬೆಗಳೊಂದಿಗೆ ಆಟವಾಡುತ್ತಾ ಇರುತ್ತದೆ. ಆದರೆ ಕೆಲ ಹೊತ್ತು ಕಳೆದ ನಂತರ ಅಮ್ಮಾ ಎಂದು ರೋದಿಸಲು ಪ್ರಾರಂಭಿಸುತ್ತದೆ. ಸ್ವಲ್ಪ ಸಮಯವಾದ ನಂತರ ಮತ್ತೆ ಅಮ್ಮಾ, ಅಮ್ಮಾ ಎಂದು ಕರೆಯುತ್ತಾ ಕೈಯಲ್ಲಿ ಇದ್ದ ಆಟದ ಸಾಮಾನುಗಳನ್ನು ಎಸೆಯುತ್ತಾ, ಅಳುತ್ತಾ ಗಮನಸೆಳೆಯುತ್ತದೆ. ಆಗ ತಾಯಿಯು ಏನು ಕಾರ್ಯಗಳನ್ನು ಮಾಡುತ್ತಿರಲಿ, ಎಲ್ಲವನ್ನೂ ತೊರೆದು ಕಂದಮ್ಮನ ಆರ್ತನಾದಕ್ಕೆ ಓಗೊಟ್ಟು ಓಡೋಡಿ ಬರುತ್ತಾಳೆ ಅಲ್ಲವೆ! ಸಾಧಾರಣ ತಾಯಿಯ ಹೃದಯ ತನ್ನ ಕಂದಮ್ಮನ ಮೊರೆಗೆ ಈ ರೀತಿ ಸ್ಪಂದಿಸುವಾಗ ಜಗಜ್ಜನನಿ ಭವತಾರಿಣಿ ನಮ್ಮ ಆರ್ತನಾದವನ್ನು ಕೇಳಿದಾಕ್ಷಣ ಒಗೊಡಲಾರಳೇ?.

ಶಂಕರ ಭಗವತ್ಪಾದಾಚಾರ್ಯರ ಸ್ತವಕುಸುಮಾಂಜಲಿಯ ಒಂದು ಪುಷ್ಪವನ್ನು ಇಲ್ಲಿ ಉದಾಹರಿಸಬಹುದಾಗಿದೆ. ‘ಕುಪುತ್ರೋ ಜಾಯೇತ ಕ್ವಚಿದತಿ ಕುಮಾತಾ ನ ಭವತಿ’ (ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ). ಹೇ ಜಗನ್ಮಾತೇ, ಅಮ್ಮಾ, ಎಂದೂ ನಾನು ನಿನ್ನ ಚರಣ ಸೇವೆಯನ್ನು ಮಾಡಿದವನಲ್ಲ; ಅಥವಾ ನಿನ್ನ ಹೆಸರಿನಲ್ಲಿ ಐಶ್ವರ್ಯವನ್ನು ದಾನ ಮಾಡಿದವನೂ ಅಲ್ಲ, ಆದರೂ ನಿನಗೆ ನನ್ನ ಮೇಲೆ ಇರುವ ವಾತ್ಸಲ್ಯ, ಪ್ರೇಮ, ಅನುಪಮವಾದುದು; ಏಕೆಂದರೆ ಈ ಜಗತ್ತಿನಲ್ಲಿ ಕುಪುತ್ರ ಹುಟ್ಟಿದರೂ ಹುಟ್ಟಬಹುದು; ಆದರೆ ಕುಮಾತ (ಕೆಟ್ಟ ತಾಯಿ) ಎಲ್ಲಿಯೂ ಕಾಣಬರುವುದಿಲ್ಲ. ಜಗಜ್ಜನನಿಯನ್ನು ತಮ್ಮ ಅತ್ಯಂತ ಶುದ್ಧ ಭಕ್ತಿಯಿಂದ ಪ್ರಾರ್ಥಿಸಿರುವ ಈ ಸ್ತವಕುಸುಮ ನಿಜಕ್ಕೂ ಎಂತಹ ನಾಸ್ತಿಕನಿಗೂ ದೇವಿ ಜಗದೀಶ್ವರಿಯ ಮೇಲೆ ಆಹೇತುಕ ಭಕ್ತಿ ಬರುವಂತಾಗಿಸುತ್ತದೆ.

ಪರಮಹಂಸರು ಈ ಯುಗದಲ್ಲಿ ಈ ತೆರನಾದ ಪವಿತ್ರ ಶುದ್ಧ ಭಕ್ತಿಯಿಂದ ಭವತಾರಿಣಿಯನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅದೊಂದು ಸತ್ಸಂಗದ ಸಂದರ್ಭ. ಭಕ್ತರೆಲ್ಲರೂ ಪರಮಹಂಸರ ದಿವ್ಯವಾಣಿಯನ್ನು ಆಲಿಸಲು ತವಕದಿಂದ ಕುಳಿತ ಸಮಯ. ಪರಮಹಂಸರು ತಮ್ಮ ಅದ್ಭುತ ಮಧುರವಾಣಿಯಿಂದ ‘ತಾಯಿ ದುರ್ಗೆಯ ನಿಜವನರಿಯುವ ಧೀರರಾರು ಜಗದೊಳು ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು’ ಎಂಬುದಾಗಿ ಕೀರ್ತನೆಯನ್ನು ಹಾಡುತ್ತಾ ಸಮಾಧಿಸ್ಥರಾಗಿದ್ದಾರೆ. ಕೆಲವು ಸಮಯ ಕಳೆದ ನಂತರ ಬ್ರಹ್ಮಮಯಿ, ಜಗನ್ಮಯಿಯ ದಿವ್ಯ ದರುಶನದ ಅನುಭವವನ್ನು ನೆರೆದ ಭಕ್ತರಿಗೆ ಭಾವಾವಸ್ಥೆಯಲ್ಲಿಯೇ ವಿವರಿಸುತ್ತಿದ್ದಾರೆ. ಈ ಪರಮಾದ್ಭುತ ಚೈತನ್ಯಭರಿತ ಸತ್ಸಂಗದಲ್ಲಿ ಭಾಗವಹಿಸಿದ ಆ ಭಕ್ತವೃಂದದವರೇ ಧನ್ಯರು ಎನ್ನಬಹುದು.

ಮತ್ತೊಂದು ದಿನ ದಕ್ಷಿಣೇಶ್ವರದಲ್ಲಿ ಭಕ್ತರೆಲ್ಲಾ ನೆರೆದಿದ್ದರು. ಪರಮಹಂಸರು ಹಾಡುತ್ತಿದ್ದ ಈ ಅದ್ಭುತ ದೇವೀ ಸಂಕೀರ್ತನೆ ಯನ್ನು ಕೇಳಿ ಭಾವಾವಿಷ್ಟರಾಗುತ್ತಾರೆ. ಆ ಸುಂದರ ಹಾಡು ಹೀಗಿದೆ;

ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ/ಮೂಲಾಧಾರ ಪದ್ಮದಿ! ಏಳು ತಾಯಿ ಶಿವನಿರುವಾ ಸಾವಿರದಳ ಕಮಲವದಳ/ಲೆನ್ನ ಶಿರೋಮಧ್ಯದಿ!/ಷಟ್ ಚಕ್ರವ ಭೇದಿಸಮ್ಮ/ ಮನದ ವ್ಯಥೆಯ ನೀಗಿಸಮ್ಮ/ಓ ಚೇತನ ರೂಪಿಣಿ! ಹೀಗೆ ಹಾಡಿದ ಪರಮಹಂಸರು ದೇವಿಯ ಎದುರು ಬಹಳ ಹೊತ್ತಿನವರೆಗೂ ಕೈಮುಗಿದು ನಿಂತಿದ್ದಾರೆ. ಕ್ರಮೇಣ ಸಮಾಧಿಸ್ಥರಾಗುತ್ತಿದ್ದಾರೆ. ಶರೀರ ಸ್ಥಿರವಾಗಿದೆ. ಕಣ್ಣುರೆಪ್ಪೆ ಹೊಡೆಯುತ್ತಿಲ್ಲ. ಬಹಳ ಹೊತ್ತಾದ ಬಳಿಕ ದೀರ್ಘ ನಿಶ್ವಾಸ ಬಿಟ್ಟರು. ಈಗ ಪ್ರಕೃತಿಸ್ಥರಾಗಿದ್ದಾರೆ, ಇನ್ನೂ ಪ್ರೇಮೋನ್ಮತ್ತರಾಗಿಯೇ ಭಗವತಿಗೆ ಹೇಳುತ್ತಿದ್ದಾರೆ; ‘ತಾಯೆ, ನಾನು ಹೋಗಿ ಬರುತ್ತೇನೆ, ಆದರೆ ಅವರಿಗೆ ಆ ಸ್ಥಳವನ್ನು ಬಿಟ್ಟು ಹೋಗಲಾಗುತ್ತಿಲ್ಲ’ ಎಂತಹ ಅದ್ಭುತ ಸನ್ನಿವೇಶ. ಅವರು ಪದೇ ಪದೇ ಹೇಳುತ್ತಿದ್ದಾರೆ; ಹೇ ತಾಯೇ, ನನ್ನ ಹೃದಯದಲ್ಲಿ ನೆಲೆಸು! ಎಂದು.

ಇದರರ್ಥ ಇಷ್ಟೇ: ನಿಜವಾದ ಅರ್ಥದಲ್ಲಿ ಭಗವತಿಯನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬೇಕಾದಲ್ಲಿ ನಮ್ಮ ಪ್ರಾರ್ಥನೆ ಅವಳಿಗೆ ತಲುಪುವಂತೆ ಮೊರೆಯಿಡಬೇಕು. ಅವಳಿಗೆ ನಮ್ಮ ಹೃದಯದ ಕೂಗು ಕೇಳಿಸುವಂತೆ ಪ್ರಾರ್ಥಿಸಬೇಕು. ಹಾಗೆಯೇ ಈ ಶರನ್ನವರಾತ್ರಿಯು ನಮ್ಮ ಹೃದಯದ ಮೊರೆಯನ್ನು ಆಲಿಸುವಂತಾಗಲಿ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ: vvsudina@gmail.com, swajapa@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net