ಪ್ರತ್ಯೇಕವಾಗಿದ್ದರೆ ಅವಲಂಬಿತರಲ್ಲ ಎನ್ನಲಾಗದು : ಹೈಕೋರ್ಟ್ ಮಹತ್ವದ ಆದೇಶ

highcourt
Published on

ಬೆಂಗಳೂರು: ವಯಸ್ಸಾದ ಪಾಲಕರು ತಮ್ಮ ಮಕ್ಕಳಿಂದ ದೂರ ಉಳಿದು ಪ್ರತ್ಯೇಕವಾಗಿ ನೆಲೆಸಿದ್ದಾರೆ ಎಂದ ಮಾತ್ರಕ್ಕೆ ಅವರು ನಿಧನ ಹೊಂದಿದ ಪುತ್ರನ ಮೇಲೆ ಅವಲಂಬಿತರಾಗಿಲ್ಲ ಎನ್ನಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಅಪಘಾತದಲ್ಲಿ ಮೃತಪಟ್ಟ ಮಗನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪಾಲಕರಿಗೆ ಪರಿಹಾರ ವಿಧಿಸಿದ್ದ ಕೋಲಾರದ ವಾಹನಗಳ ಅಪಘಾತ ನ್ಯಾಯಾಧೀಕರಣ ಆದೇಶವನ್ನು ಪ್ರಶ್ನಿಸಿ, ಬಜಾಜ್ ಅಲಯಾನ್ಸ್ ಜನರಲ್ ಇನ್ಶೂರೆನ್ಸ್ ವಿಮಾ ಕಂಪನಿ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ವಾರಸುದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್. ಮುದಗಲ್ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ವಿಮಾ ಕಂಪನಿಯ ಪರ ವಕೀಲರು, ಮೃತರ ಪಾಲಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರನ್ನು ಅವಲಂಬಿತರು ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಮೃತರ ಮಗನಿಗೆ ಅನುಕಂಪದ ಆಧಾರದಲ್ಲಿ ಸರ್ಕಾರದ ಉದ್ಯೋಗ ಲಭ್ಯವಾಗಿದೆ. ಆದ್ದರಿಂದ ಪ್ರಕರಣದಲ್ಲಿ ಅವರ ಅವಲಂಬಿತರಿಗೆ ನಷ್ಟವಾಗಿದೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಪರಿಣಾಮ ಯಾವುದೇ ಪರಿಹಾರ ನೀಡಬೇಕಾದ ಅಗತ್ಯವಿಲ್ಲ ಎಂಬುದಾಗಿ ವಾದ ಮಂಡಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಮೃತರ ಪರ ವಕೀಲರು, ಮೃತರ ಪಾಲಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಅವರು ಮಗನನ್ನೇ ಅವಲಂಬಿಸಿದ್ದರು. ಹೀಗಾಗಿ ಪರಿಹಾರ ನೀಡಬೇಕು ಎಂದು ವಾದ ಮಂಡಿಸಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಹಲವು ಸಂದರ್ಭಗಳಲ್ಲಿ ಮಕ್ಕಳು ಉದ್ಯೋಗದಲ್ಲಿದ್ದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೂ, ಪಾಲಕರು ಮಕ್ಕಳ ಅವಲಂಬಿತರಾಗಿ ಗ್ರಾಮಗಳಲ್ಲಿ ನೆಲೆಯೂರಿರುತ್ತಾರೆ. ಈ ಸನ್ನಿವೇಶ ಪರಿಗಣಿಸಿದಾಗ ಅವರನ್ನು ಅವಲಂಬಿತರಲ್ಲ ಎಂದು ಘೋಷಣೆ ಮಾಡಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಜತೆಗೆ ಪರಿಹಾರ ಮೊತ್ತವನ್ನು 23 ಲಕ್ಷಗಳಿಗೆ ಹೆಚ್ಚಳ ಮಾಡಿದ್ದು, ಅದರಲ್ಲಿ ಶೇ.50 ಪತ್ನಿಗೆ, ಶೇ.30 ಮಕ್ಕಳಿಗೆ ಮತ್ತು ಶೇ.20 ಪೋಷಕರಿಗೆ ನೀಡಬೇಕು ಎಂದು ಸೂಚನೆ ನೀಡಿ ಆದೇಶಿಸಿದೆ.

ಅಲ್ಲದೆ, ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಮೃತರ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಲಭ್ಯವಾಗಿದೆ ಎಂದ ಮಾತ್ರಕ್ಕೆ ಮೃತರ ವಿಮೆ, ಪಿಂಚಣಿ ಮತ್ತು ಗ್ರಾಚ್ಯೂಟಿಗಳನ್ನು ಪಡೆಯಲು ಕುಟುಂಬಕ್ಕೆ ಅಡ್ಡಿಯಾಗುವುದಿಲ್ಲ. ಹೀಗಾಗಿ, ಅಪಘಾತದಿಂದ ಆದ ನಷ್ಟಕ್ಕೆ ಪರಿಹಾರ ಮೊತ್ತವನ್ನು ಕಡಿತ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net