ಕಾಡಿದರೆ ಅವ್ಯಕ್ತ ಭಯ ಬದುಕೇ ಅಯೋಮಯ

Tension
Published on
Hello Doctor
ಹಿಂಸೆಯಿಂದ ಯಾವ ಸಮಸ್ಯೆಗೂ ಪರಿಹಾರವಿಲ್ಲ. ಅದು ಸಮಾಜದ ಶಾಂತಿ, ನೆಮ್ಮದಿಯನ್ನು ಹಾಳುಮಾಡುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುತ್ತದೆ. ಇದರ ಪರಿಣಾಮ ಆ ವ್ಯಕ್ತಿಯ ಕುಟುಂಬದ ಮೇಲಾಗುತ್ತದೆ. ಆತನ ಮನಸ್ಸು ಕೂಡ ವಿಚಲಿತಗೊಳ್ಳುತ್ತದೆ. ಹಿಂಸೆ ಎಂದರೆ ನೇರವಾಗಿ ಹಿಂಸೆಯೇ ಅಲ್ಲ. ಅದರಿಂದಾಗುವ ಅನಾಹುತದ ಭೀತಿಯೂ ಮನುಷ್ಯನನ್ನು ಕುಬ್ಜನನ್ನಾಗಿಸುತ್ತದೆ. ಇದಕ್ಕೆ ಒಂದು ನಿದರ್ಶನ ಇಲ್ಲಿದೆ.

ಕೆಲ ದಿನಗಳ ಹಿಂದೆ ಒಂದು ಮಧ್ಯಮ ವರ್ಗದ ಕುಟುಂಬ ನನ್ನ ಬಳಿ ಬಂದಿತ್ತು. ತಂದೆ ತಾಯಿ ಮತ್ತು ಏಕಮೇವ ಪುತ್ರ. ತಂದೆ ಖಾಸಗಿ ಉದ್ಯೋಗದಲ್ಲಿದ್ದಾರೆ. ತಾಯಿ ಗೃಹಿಣಿ. ಮಗ ಇಂಜಿನಿಯರಿಂಗ್ ಪದವೀಧರ. ಒಳ್ಳೆಯ ಕಂಪನಿಯಲ್ಲಿ ಉತ್ತಮ ಸಂಬಳದ ಉದ್ಯೋಗ. ಆದರೆ ಕೆಲ ದಿನಗಳಿಂದ ಆತ ಕಚೇರಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾನೆ. ಇದ್ದಕ್ಕಿದ್ದಂತೆ

ಮಗನ ಈ ವಿಚಿತ್ರ ವರ್ತನೆ ಪಾಲಕರ ನೆಮ್ಮದಿ ಕಸಿದಿದೆ. ಆತನಿಗೆ ಯಾವುದೇ ಸಮಸ್ಯೆಯಿಲ್ಲ. ಆದರೂ ಆಫೀಸಿಗೆ ಹೋಗಲು ಭಯವಾಗುತ್ತದೆ ಎಂದು ಹೇಳಲಾರಂಭಿಸಿದ್ದನ್ನು ಪಾಲಕರು ವಿವರಿಸಿದರು. ನಾನು ಆತನನ್ನು ಕರೆದು ಕೇಳಿದೆ: ‘ಯಾಕೆ ಈ ಉದ್ಯೋಗ ನಿನಗೆ ಹಿಡಿಸಿಲ್ಲವೇ? ಕಂಪನಿಯಲ್ಲಿ ಯಾರಾದರೂ ಹೀಯಾಳಿಸುತ್ತಾರಾ?’ ಎಂದೆಲ್ಲಾ ಕೇಳಿದಾಗ ಆತ ‘ಇಲ್ಲ ಇಲ್ಲ ಹಾಗೇನಿಲ್ಲ’ ಎಂದ. ಮುಂದೆ ಕೆಲ ಕ್ಷಣದ ನಂತರ, ‘ನಾಳೆ ನಮ್ಮ ಕಂಪನಿಯ ಕಟ್ಟಡ ಬಿದ್ದರೆ ನಾವೆಲ್ಲರೂ ಸಾಯುವುದಿಲ್ಲವೇ? ಎದುರಾಳಿ ರಾಷ್ಟ›ಗಳು ನಮ್ಮ ದೇಶದ ಮೇಲೆ ಬಾಂಬ್ ಹಾಕಿದರೆ ನಮ್ಮ ಗತಿ ಏನು? ಟಿವಿಯಲ್ಲಿ ಯುದ್ಧದ ದೃಶ್ಯಗಳನ್ನು ನೋಡುತ್ತಿದ್ದಂತೆ ನನ್ನ ಎದೆ ಝುಲ್ ಎನ್ನುತ್ತದೆ. ನಾನಿನ್ನೂ ಯುವಕ. ನೂರೆಂಟು ಕನಸುಗಳಿವೆ. ಹೀಗೆ ಹಿಂಸೆಯಿಂದ ಸಾವು ಎದುರಾದರೆ ನಾನೇನು ಮಾಡಲಿ? ಈ ಭಯವೇ ನನ್ನನ್ನು ಕಾಡುತ್ತಿದೆ. ಇದೆಲ್ಲದರ ಪರಿಣಾಮ ನಾನು ಆಫೀಸಿಗೆ ಹೋಗಲು ಹೆದರುತ್ತೇನೆ. ಒಂದೊಮ್ಮೆ ಹೊರಟರೂ ಇದ್ದಕ್ಕಿದ್ದಂತೆ ಆಫೀಸ್ ಕಟ್ಟಡದ ಮೇಲೆ ಯಾವುದೋ ವಿಮಾನ ಹಾರಾಡಿದಂತೆ ಅನಿಸುತ್ತದೆ. ಇದು ಬಿಟ್ಟರೆ ನನಗೆ ಬೇರೇನೂ ಸಮಸ್ಯೆಯಿಲ್ಲ. ಈ ಭಯ ನನ್ನನ್ನು ಒಳಗೊಳಗೆ ಕೊಲ್ಲುತ್ತಿದೆ. ಬಹಿರಂಗವಾಗಿ ಹೇಳಿಕೊಳ್ಳಲೂ ಆಗುತ್ತಿಲ್ಲ. ಅನುಭವಿಸಲೂ ಆಗುತ್ತಿಲ್ಲ’ ಎಂದು ವಿವರಿಸಿದ.

ನನಗೆ ಈತನ ಸ್ವಭಾವ ಮತ್ತು ಸೂಕ್ಷ್ಮತೆ ಅರ್ಥವಾಯಿತು. ಆತನ ದಿನಚರಿ ಕೇಳಿದೆ. ಟಿವಿ ನೋಡಿದಾಗ ಏನು ನೋಡುತ್ತೀಯಾ? ಯುದ್ಧ, ಹಿಂಸೆ ತರಹದ ವಿಷಯ ಬಿಟ್ಟುಬಿಡು. ಅಧ್ಯಾತ್ಮ, ಇತಿಹಾಸ, ಕಾಡುಮೇಡಿನ ಬಗ್ಗೆ ಅರಿಯುವ ಯತ್ನ ಮಾಡು. ಯುದ್ಧದ ಚಿಂತೆ ನಿನಗೆ ಬೇಡ. ಅದರಿಂದ ಹೊರಗೆ ಬಾ. ಜಗತ್ತು ವಿಶಾಲವಿದೆ. ನೀನು ಕೂಡ ವಿಶಾಲ ಮನಸ್ಸು ಮತ್ತು ಸಕಾರಾತ್ಮಕ ದೃಷ್ಟಿಯಿಂದ ಜಗತ್ತನ್ನು ನೋಡು. ಅಲ್ಲಿ ಏನೆಲ್ಲಾ ಸಂತಸದ ವಿಷಯಗಳಿವೆ. ಅವುಗಳನ್ನು ಆಸ್ವಾದಿಸು ಎಂದು ಹೇಳಿ ಒಳ್ಳೆಯ ಪುಸ್ತಕ ಕೊಟ್ಟು ಕಳಿಸಿದೆ. ಅದರಂತೆ ಆತ ಅದನ್ನು ಓದಲು ಆರಂಭಿಸಿದ ಕೆಲವೇ ದಿನಗಳಲ್ಲಿ ಆ ಭಯದ ಲೋಕದಿಂದ ಹೊರಬಂದ. ಹಸನ್ಮುಖಿಯಾದ.

ಇದು ಒಂದು ಅಲ್ಪ ಪ್ರಮಾಣದ ಮನೋಸಮಸ್ಯೆ. ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳಲ್ಲಿ ಇದು ಸಾಮಾನ್ಯ. ಕೆಲವರಿಗೆ ರಕ್ತಪಾತ, ಹಿಂಸೆ, ಅಪಘಾತ ಮುಂತಾದ ದೃಶ್ಯಗಳನ್ನು ನೋಡುವ ಧೈರ್ಯ ಇರುವುದಿಲ್ಲ. ಯಾರೂ ನೋಡಲು ಬಯಸುವುದಿಲ್ಲ. ಆದರೆ ಕೆಲವರಿಗೆ ಅದನ್ನು ಊಹಿಸಿಕೊಂಡರೆ ಕೂಡ ಬದುಕೇ ಭಾರ ಎನಿಸಿಬಿಡುತ್ತದೆ. ಇನ್ನು ಹಲವರಿಗೆ ಜೀವಭಯವೇ ಶುರುವಾಗಿ ಬಿಡುತ್ತದೆ. ಇದರ ಪರಿಣಾಮ ಅಂಥವರು ಮನೆಯಿಂದ ಆಚೆ ಬರಲು ಹೆದರುತ್ತಾರೆ. ಎಲ್ಲರ ಮೇಲೂ ಸಂಶಯ ಶುರು ಮಾಡುತ್ತಾರೆ. ಯಾರೋ ನನ್ನನ್ನು ಹಿಂಬಾಲಿಸುತ್ತಿದ್ದಾರೆ. ದಿಢೀರ್ ಹಲ್ಲೆ ಮಾಡುತ್ತಾರೆ. ನನ್ನ ಕಥೆ ಮುಗೀತು ಅಷ್ಟೇ... ಹೀಗೆಲ್ಲಾ ನಕಾರಾತ್ಮಕ ಆಲೋಚನೆಗಳು ಇವರಲ್ಲಿ ಜಾಗೃತವಾಗಿರುತ್ತವೆ. ಮಾಧ್ಯಮಗಳಲ್ಲಿ ಯುದ್ಧದ ಸುದ್ದಿ ಓದಿರುತ್ತಾರೆ, ನೋಡಿರುತ್ತಾರೆ. ಅಲ್ಲಿನ ಸಾವು ನೋವು ಇವರ ಮನಸ್ಸಿನ ಮೇಲೆ ಪರಿಣಾಮ ಬೀರಿರುತ್ತದೆ. ಇದಕ್ಕೆ ಮದ್ದು ಎಂದರೆ ಅವರಲ್ಲಿ ಧೈರ್ಯ ತುಂಬುವುದು ಮತ್ತು ನಾಲ್ಕು ಜನರೊಡನೆ ಬೆರೆಯುವಂತಾಗಿಸುವುದು. ಪ್ರೇರಣಾದಾಯಕ, ಸಾಧಕರ ಸಾಧನೆ ತಿಳಿಸುವ ಪುಸ್ತಕಗಳನ್ನು ಓದಿಸುವುದು, ಹಾಸ್ಯದ ಸನ್ನಿವೇಶವುಳ್ಳ ಚಲನಚಿತ್ರಗಳನ್ನು ತೋರಿಸುವುದು, ಜೀವನ್ಮುಖಿ ಚಿಂತನೆಗಳನ್ನು ಹೇಳುವುದು. ಇದು ಸುಲಭವಾಗಿ ಬಗೆಹರಿಯಬಹುದಾದ ಸಮಸ್ಯೆ. ಆದರೆ ಇದು ಬಲವಾಗಿ ಬೇರೂರುವ ಮೊದಲೇ ಮನೋವೈದ್ಯರ ಬಳಿ ಕರೆದೊಯ್ದು ಆಪ್ತ ಸಮಾಲೋಚನೆ ಮೂಲಕ ಭಯವನ್ನು ನಿಮೂಲನೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net