

Elon Musk : ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಸುಮಾರು ಅರ್ಧ ಟ್ರಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ತಲುಪಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಟ್ರ್ಯಾಕರ್ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಮೌಲ್ಯ ಈಗ $500.1 ಬಿಲಿಯನ್ ಆಗಿದೆ. ಅವರ ನಿವ್ವಳ ಮೌಲ್ಯವು ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ಗಿಂತ $150 ಬಿಲಿಯನ್ ಹೆಚ್ಚಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಬಿಲಿಯನೇರ್ ಎಲಾನ್ ಮಸ್ಕ್ ಅವರ ಈ ಅಗಾಧ ಸಂಪತ್ತು ಅವರ ಎಲೆಕ್ಟ್ರಿಕ್ ವಾಹನ ಕಂಪನಿ ಟೆಸ್ಲಾಗೆ ಸಂಬಂಧಿಸಿದೆ. ಸೆಪ್ಟೆಂಬರ್ 15ರ ಹೊತ್ತಿಗೆ, ಅವರು ಕಂಪನಿಯ ಶೇ. 12.4 ಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿದ್ದರು. ಬುಧವಾರ ಮಧ್ಯಾಹ್ನ 3.30 ರ ಹೊತ್ತಿಗೆ ಟೆಸ್ಲಾ ಷೇರುಗಳು ಸುಮಾರು ಶೇ. 4 ರಷ್ಟು ಏರಿಕೆಯಾಗಿದ್ದು, ಮಸ್ಕ್ ಅವರ ಸಂಪತ್ತಿಗೆ $9.3 ಬಿಲಿಯನ್ ಸೇರ್ಪಡೆಯಾಗಿದೆ. ಕಂಪನಿಯ ಷೇರು ಮೌಲ್ಯವು ಹೆಚ್ಚುತ್ತಲೇ ಇರುವುದರಿಂದ, ಮಸ್ಕ್ ಅವರ ಸಂಪತ್ತು ಕೂಡ ಬೆಳೆಯುತ್ತಲೇ ಇದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಸ್ಕ್ ಅವರ ಟೆಸ್ಲಾ ಷೇರುಗಳು ಏರಿಕೆಯಾಗಿವೆ. ಆದರೆ, ಟ್ರಂಪ್ ಮತ್ತು ಮಸ್ಕ್ ನಡುವೆ ವೈಮನಸ್ಸು ಇರುವುದು ಗೊತ್ತಿಲ್ಲದ ವಿಚಾರವೇನಲ್ಲ. ಟ್ರಂಪ್ ಆಡಳಿತದಿಂದ ಬೇಸತ್ತು ಮಸ್ಕ್ ಅವರು ಸರ್ಕಾರದಿಂದ ಹೊರಬಂದರು. ಮಸ್ಕ್ ವಿರುದ್ಧ ಟ್ರಂಪ್ ಆಗಾಗ ವಾಗ್ದಾಳಿ ಕೂಡ ನಡೆಸುತ್ತಿರುತ್ತಾರೆ. ಇಷ್ಟೆಲ್ಲ ಆದರೂ ಮಸ್ಕ್ ಕಂಪನಿ ಷೇರುಗಳು ಬೆಳೆದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಹೇಳಬಹುದು.
ಇನ್ನು ಮಸ್ಕ್ ಅವರು AI ಸ್ಟಾರ್ಟ್ಅಪ್ XAI ಮತ್ತು ಸ್ಪೇಸ್ಎಕ್ಸ್ ಕಂಪನಿಯನ್ನು ವಿಸ್ತರಿಸಲು ತಯಾರಿ ನಡೆಸುತ್ತಿದ್ದು, ಇದು ಮಸ್ಕ್ ಅವರ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಪಿಚ್ಬುಕ್ ದತ್ತಾಂಶದ ಪ್ರಕಾರ, ಜುಲೈ ವೇಳೆಗೆ XAI ಮೌಲ್ಯ $75 ಬಿಲಿಯನ್ ಆಗಿತ್ತು. ಇದೇ ಸಂದರ್ಭದಲ್ಲಿ ಸ್ಪೇಸ್ಎಕ್ಸ್ ಮೌಲ್ಯ $400 ಬಿಲಿಯನ್ (ಬ್ಲೂಮ್ಬರ್ಗ್ ಪ್ರಕಾರ) ಆಗಿತ್ತು. ಮಸ್ಕ್ ಅವರ ಸಂಪತ್ತು ಈ ದರದಲ್ಲಿ ಬೆಳೆಯುತ್ತಿದ್ದರೆ, ಕೆಲವೇ ವರ್ಷಗಳಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಆಗಬಹುದು ಎಂದು ಫೋರ್ಬ್ಸ್ ವರದಿ ತಿಳಿಸಿದೆ. (ಏಜೆನ್ಸೀಸ್)