ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ; ನಿಖಿಲ್ ಕುಮಾರಸ್ವಾಮಿ

NIKHIL KUMARSWAMI
ವಿಜಯಪುರದಲ್ಲಿ ನಿಖಿಲ್ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.
Published on

ವಿಜಯಪುರ: ಮುಡಾ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯನವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ತನಿಖೆಗೆ ಸಹಕರಿಸಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ಇಲ್ಲಿನ ಸಿದ್ಧಾರೂಢ ಮಠದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಆರೋಪ ಕೇಳಿ ಬಂದಾಗ ತನಿಖೆಗೆ ಹೋಗಬೇಕು, ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದವರು ನೀವು. ಇದೀಗ ನಿಮ್ಮ ಮೇಲೆ ಆರೋಪ ಬಂದಿದೆ. ತಾವೂ ಸಹ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು. ಅವರಿಗೆ ಒಂದು ನ್ಯಾಯ, ನಿಮಗೊಂದು ನ್ಯಾಯವಾ? ಎಂದು ಪ್ರಶ್ನಿಸಿದರು.

ಮೂಡಾ ಹಗರಣದಲ್ಲಿ ಸ್ವತಃ ಈ ರಾಜ್ಯದ ಸಿಎಂ ಭಾಗಿ ಆಗಿದ್ದಾರೆ. ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಇವತ್ತು ಏನು ಮಾಡಿದ್ದಾರೆ ಗೊತ್ತಿದೆ. ಸಿದ್ದರಾಮಣ್ಣನವರು ಹಿರಿಯರಿದ್ದಾರೆ. ಅನುಭವಿಗಳಿದ್ದಾರೆ. ವಕೀಲರಿದ್ದಾರೆ. ಯಡ್ಡಿಯೂರಪ್ಪ ಸಾಹೇಬ್ರ ಮೇಲೆ ಆರೋಪ ಬಂದಾಗ ನೀವು ಆರೋಪ ಮುಕ್ತವಾಗಿ ಬರುವವರೆಗೂ ರಾಜಿನಾಮೆ ಕೊಡಿ ಅಂತಾ ಹೇಳಿದ್ರು. ಇದೀಗ ನೀವು ಸಹ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕೆಂದರು. ತನಿಖೆ ಪಾರದರ್ಶಖವಾಗಿ ನಡೆಯಬೇಕಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದರು.

ಕುಮಾರಸ್ವಾಮಿ ಮೊದಲು ರಾಜಿನಾಮೆ ಕೊಡಲಿ ಎಂಬ ಸಚಿವ ಎಂ.ಬಿ. ಪಾಟೀಲರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ವಿಪಕ್ಷದವರನ್ನು ಪ್ರಶ್ನೆ ಕೇಳುವ ಸ್ಥಿತಿ ಬಂದಿದೆ. ಅದೆಲ್ಲ ಹಳೆಯ ಕಥೆ. ಅದನ್ನು ತಿರುಚೋದು ಬೇಡ. ರಾಜ್ಯದ ಜನತೆ ಕೇಳುತ್ತಿರುವ ಪ್ರಶ್ನೆಗೆ ಅವರು ಉತ್ತರಿಸಲಿ ಅಷ್ಟೆ. ನಮ್ಮ ಮೇಲೆ ಸುಳ್ಳು ದಾಖಲೆ ಹುಡುಕುವುದರಲ್ಲಿ ಕಾಂಗ್ರೆಸ್ ಸಮಯ ಕಳೆಯುತ್ತಿದ್ದಾರೆ. ಜನ 136 ಶಾಸಕರನ್ನು ಗೆಲ್ಲಿಸಿ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಪಾದಯಾತ್ರೆ ಯಶಸ್ಸು ಇವರಿಗೆ ಸಹಿಸಲಾಗುತ್ತಿಲ್ಲ. ನಾವು ಪಾದಯಾತ್ರೆ ಮಾಡಿದ್ದು ಯಾವುದೋ ಒಂದು ವ್ಯಕ್ತಿಯ ಮೇಲಿನ ದ್ವೇಷದಿಂದ ಅಲ್ಲ. ರಾಜ್ಯದ ಸಂಪತ್ತು ಲೂಟಿ ಆದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಲಾಗಿತ್ತು ಎಂದರು.

ದರ್ಶನ್ ಪ್ರಕರಣದ ವಿಚಾರ

ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿಗೆ ಮಾತನಾಡಲು ಇಷ್ಟ ಪಡದ ನಿಖಿಲ್ ಕುಮಾರಸ್ವಾಮಿ, ಜಮೀರ್ ಅಹಮದ್ ಬಳ್ಳಾರಿ ಉಸ್ತುವಾರಿ ಎನ್ನುವ ಕಾರಣಕ್ಕೆ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಷ್ಟೇ ಬಲಿಷ್ಠ, ಪ್ರಭಾವಿಗಳಿದ್ದರೂ ಈ ನೆಲದ ಕಾನೂನಿಗೆ ತಲೆಬಾಗಬೇಕು. ಅಂತಿಮವಾಗಿ ಕಾನೂನು ಇದೆ. ಕೋರ್ಟ್ ಇದೆ. ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net