ಹೊಂದಾಣಿಕೆ ರಾಜಕಾರಣದ ದಾಖಲೆಗಳಿದ್ದರೆ ತತಕ್ಷಣ ಬಿಡುಗಡೆ ಮಾಡಲಿ: ಯತ್ನಾಳ್ ಗೆ ವಿಜಯೇಂದ್ರ ಸೆಡ್ಡು

B Y Vijayendra
Published on

ಬೆಂಗಳೂರು: ಹೊಂದಾಣಿಕೆ ರಾಜಕಾರಣದ ವಿಡಿಯೋ, ದಾಖಲೆಗಳಿದ್ದರೆ, ಯಾವುದೇ ಮುಹೂರ್ತ ಅಥವಾ ಘಳಿಗೆಗೆ ಕಾಯದೆ ತತಕ್ಷಣ ಬಿಡುಗಡೆ ಮಾಡಲು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಿಗೆ ಮನವಿ ಮಾಡುವೆ. ಜತೆಗೆ ಆಗ್ರಹವನ್ನೂ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೆಡ್ಡು ಹೊಡೆದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ವಿರುದ್ಧ ಪದೇ ಪದೆ ಹೊಂದಾಣಿಕೆ ರಾಜಕೀಯದ ಗೂಬೆ ಕೂರಿಸಿ ಪಕ್ಷದ ಸಂಘಟನೆಗೆ ಪೆಟ್ಟು ನೀಡುವುದು ಬೇಡ. ಅದೇನೇ ದಾಖಲೆಗಳಿದ್ದರೂ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ನಾಯಕರ ಬಗ್ಗೆ ಹಾದೀಲಿ, ಬೀದೀಲಿ ಹಗುರ‌ ಮಾತು, ಟೀಕೆ-ಟಿಪ್ಪಣಿ ಮಾಡುವವರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎನ್ನುವುದು ಕಾರ್ಯಕರ್ತರ‌ ಅಪೇಕ್ಷೆಯಾಗಿದೆ. ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿದ ವೇಳೆ ಯತ್ನಾಳ್ ವಿರುದ್ಧ ಚಾಡಿ ಹೇಳಿಲ್ಲ. ಅದರ ಅಗತ್ಯವೂ ನನಗಿಲ್ಲ. ಯತ್ನಾಳ್ ಜತೆಗಿರುವ ಎಲ್ಲರೂ ಯಡಿಯೂರಪ್ಪ ಅಥವಾ ವಿಜಯೇಂದ್ರ ವಿರೋಧಿಗಳಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ಅಡ್ಡಿಯಾಗಿದ್ದಕ್ಕೆ ಬೇಸರ

ರಾಜ್ಯ ಸರ್ಕಾರದ ವೈಫಲ್ಯ, ಮುಡಾ ಅಕ್ರಮ ಹಾಗೂ ವಾಲ್ಮೀಕಿ ನಿಗಮದ ಹಗರಣ ಮುಂದಿಟ್ಟುಕೊಂಡು ಯಶಸ್ವಿ ಹೋರಾಟದ ಸಂಘಟಿಸಿ ಸರ್ಕಾರದ ಕೈಕಟ್ಟಿ ಹಾಕಿದ್ದೆವು. ಆದರೆ ಕೆಲವರು ಸ್ವಾರ್ಥಕ್ಕಾಗಿ ಅಡ್ಡಿಯಾಗಿದ್ದಕ್ಕೆ ಕಾರ್ಯಕರ್ತರಲ್ಲಿ ಬೇಸರವಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸೋತಿದ್ದಕ್ಕೆ ಕಾರ್ಯಕರ್ತರು ನೊಂದಿದ್ದಾರೆ‌.

ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರು ಇದನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಭ್ರಮೆಯಿಂದ ಹೊರಬರಬೇಕು. ಪಕ್ಷದ ಸಂಘಟನಾ ಪರ್ವ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂಘಟನೆ ಜತೆ ಕೈಜೋಡಿಸಬೇಕು ಎಂದು ಭಿನ್ನರ ಬಣಕ್ಕೆ ಜಾಡಿಸುತ್ತಲೇ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net