

ಶಿವಮೊಗ್ಗ: ವೀರಶೈವ ಸಮಾಜದ ಎಲ್ಲ ಉಪ ಪಂಗಡಗಳು ಸೇರಿ ಸಮುದ್ರದಂತೆ ಆಗಬೇಕು. ಆಗ ಮಾತ್ರ ವೀರಶೈವ ಸಮಾಜವನ್ನು ಯಾರೂ ಏನೂ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡು ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಜೆ.ಎಚ್.ಪಟೇಲ್ ಬಡಾವಣೆಯ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನೊಳಂಬ ಸ್ವಯಂಸೇವಕ ಸಂಘದ ಶಿವಮೊಗ್ಗ ಜಿಲ್ಲಾ ಘಟಕ, ನೊಳಂಬ ಸಮಾಜದ ನಂದಿ ವಿದ್ಯಾಸಂಸ್ಥೆ, ವೀರಶೈವ ಯುವ ವೇದಿಕೆ ಹಾಗೂ ನಂದಿ ಮಹಿಳಾ ವೇದಿಕೆ ಆಶ್ರಯದಲ್ಲಿ ನೊಳಂಬ ಸಂಗಮ-ಶಿವಮೊಗ್ಗ ಜಾತ್ರೆ ಮತ್ತು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಸಮಾಜ ಎಂಬುದು ಸಮುದ್ರ ಇದ್ದಂತೆ. ಉಪ ಪಂಗಡಗಳು ನದಿಗಳಿದ್ದಂತೆ. ಎಲ್ಲ ನದಿಗಳು ಹರಿದು ಸಮುದ್ರಕ್ಕೆ ಸೇರಿ ಅದರ ಶಕ್ತಿಯನ್ನು ಹೆಚ್ಚುತ್ತವೆ. ಅದೇ ರೀತಿ ವೀರಶೈವ ಸಮಾಜದ ಎಲ್ಲ ಒಳಪಂಗಡಗಳು ಒಟ್ಟಾಗಿದ್ದರೆ ಸಮಾಜದ ಶಕ್ತಿಯೂ ಇಮ್ಮಡಿಯಾಗಲಿದೆ ಎಂದು ಹೇಳಿದರು.
ತಿಪಟೂರು ಶಾಸಕ ಕೆ.ಷಡಕ್ಷರಿ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೆಕೆರೆ, ನೊಳಂಬ ಸಮಾಜದ ಅಧ್ಯಕ್ಷ ಧನಂಜಯ, ಜಿಲ್ಲಾಧ್ಯಕ್ಷ ಜಯರಾಜ, ಗೌರವಾಧ್ಯಕ್ಷ ಜೆ.ಪಿ.ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಪ್ರಮೀಳಾ ಚಂದ್ರಪ್ಪ, ಪ್ರಮುಖರಾದ ಡಿ.ಬಿ.ಶಂಕರಪ್ಪ, ಜಗದೀಶ್ ಮಂಡ್ರೆ, ಎಂ.ಆರ್.ಸುರೇಶ್, ಬಿ.ಬಿ.ಉಮೇಶ್, ಚೇತನ್, ಎಂ.ಉಮೇಶ್, ವಿಆರ್‌ಎಲ್‌ನ ಆನಂದ್ ಉಪಸ್ಥಿತರಿದ್ದರು.