

ಶಿವಮೊಗ್ಗ: ನಾಲಿಗೆ ಶುದ್ಧವಾಗಿದ್ದರೆ ನಾಡು ಶುದ್ಧವಾಗಿರುತ್ತದೆ. ನಮ್ಮ ನಾಲಿಗೆ ಶುದ್ಧವಾಗಿದ್ದರೆ ನಮ್ಮ ಮಾತುಗಳು ಶುದ್ಧವಾಗಿರುತ್ತದೆ. ಆಗ ಯಾವುದೇ ಜಗಳ ವೈ-ಮನಸು ಬರುವುದಿಲ್ಲ. ಮಾತಿನಿಂದಲೇ ಸ್ನೇಹ, ಮಾತಿನಿಂದಲೇ ವೈರತ್ವ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ನಾಲಿಗೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಮಳಲಿ ಮಠದ ಶ್ರೀ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಸವೇಶ್ವರ ನಗರದ ಶಿವಾಲಯದಲ್ಲಿ ಶ್ರಾವಣ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಏರ್ಪಡಿಸಿದ್ದ ಇಷ್ಟಲಿಂಗ ಪೂಜೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲನೆ ಮಾಡಿದಾಗ ಬದುಕು ಅತ್ಯಂತ ಸುಂದರವಾಗಿರುತ್ತದೆ. ಜೀವನದಲ್ಲಿ ಎಲ್ಲಕ್ಕಿಂತಲೂ ಮಿಗಿಲಾದ ಸಂಪತ್ತು ಎಂದರೆ ಆರೋಗ್ಯ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯವಾಗಿ ಬಾಳಬೇಕು. ಇದಕ್ಕೆ ಆಧ್ಯಾತ್ಮದ ಹಾದಿ ಅತ್ಯಂತ ಶ್ರೇಯಸ್ಕರ ಎಂದು ತಿಳಿಸಿದರು.
ಯಾರೊಬ್ಬರೂ ನೇರವಾಗಿ ದೇವರನ್ನ ಕಾಣಲು ಸಾಧ್ಯವಿಲ್ಲ. ಗುರುವಿನ ಮುಖಾಂತರ ದೇವರನ್ನ ಕಾಣಬಹುದಾಗಿದೆ. ನಮ್ಮ ಕೆಲಸದಲ್ಲಿ ಗುರಿ ಇರಬೇಕು. ಆ ಗುರಿಯ ಹಿಂದೆ ಒಬ್ಬ ಗುರು ಇರಬೇಕು. ಜೀವನದಲ್ಲಿ ಸಮಯ ಪರಿಪಾಲನೆ ಅತ್ಯಂತ ಅವಶ್ಯ. ಸಮಯ ಮೀರಿದ ಮೇಲೆ ಮತ್ತೆ ಮರಳಿಬಾರದು. ಆದ್ದರಿಂದ ಸಮಯಕ್ಕೆ ನಾವೆಲ್ಲರೂ ಮಹತ್ವ ಕೊಡಲೇಬೇಕು. ಪ್ರತಿಯೊಬ್ಬ ಶಿವಭಕ್ತನು ಇಷ್ಟಲಿಂಗ ಪೂಜೆಯನ್ನು ಮಾಡಬೇಕು. ನಮ್ಮ ಎಲ್ಲ ನ್ಯೂನತೆಗಳು ದೂರಾದಾಗ ಮಾತ್ರ ಶಿವನನ್ನು ಕಾಣಲು ಸಾಧ್ಯ ಎಂದು ಹೇಳಿದರು.
ವೀರಶೈವ ಬಳಗದ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.