ಭಾವ ಶುದ್ಧವಾಗಿದ್ದರೆ ಸದ್ಗುಣ ನೆಲೆ

srb dharmika (2)
ಸೊರಬ ಜಡೆ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಶಾಸೀ ಬೂದಿಹಾಳ ಜೀವನ ದರ್ಶನ ಪ್ರವಚನ ನೀಡಿದರು. ಘನಬಸವ ಅಮರೇಶ್ವರ ಸ್ವಾಮೀಜಿ, ಶ್ರೀ ಸದಾಶಿವ ಮಹಾಸ್ವಾಮಿ, ಶ್ರೀ ಮಹಾಂತ ಸ್ವಾಮೀಜಿ ಇತರರಿದ್ದರು.
Published on

ಸೊರಬ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರು ಕಾಯಕಕ್ಕೆ ಮಹತ್ವ ನೀಡಿದ್ದರು. ಮನುಷ್ಯನ ಭಾವ ಶುದ್ಧಿಯಾದರೆ ಅವನಲ್ಲಿ ಸದ್ಗುಣಗಳು ನೆಲೆಗೊಳ್ಳುತ್ತವೆ ಎಂದು ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಗದುಗಿನ ಶ್ರೀ ಗವಿಸಿದ್ದೇಶ್ವರ ಶಾಸೀ ಬೂದಿಹಾಳ ಹೇಳಿದರು.

ಜಡೆಯ ಮಹಾ ತಪಸ್ವಿ ಶ್ರೀ ಜಗದ್ಗುರು ಕುಮಾರಕೆಂಪಿನ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಮಠದ ಆವರಣದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಮಾನವ ದೇವರಾಗಬೇಕಾದರೆ ಅಂಗದಲ್ಲಿ ಲಿಂಗವನ್ನು ಕಟ್ಟಿಕೊಳ್ಳಬೇಕು. ಸದ್ಗುಣ ನೆಲೆಗೊಳ್ಳಬೇಕು. ಪರಮಾತ್ಮನ ಕೃಪೆಗಾಗಿ ದಾಸೋಹಗಳು ನಡೆಯಬೇಕು. ನಿತ್ಯ ಜೀವನದಲ್ಲಿ ಕಾಯಕ ಇರಬೇಕು. ಮನಸಿನಲ್ಲಿ ದೃಢವಾದ ಭಾವ, ಭಕ್ತಿ ನಿಶ್ಚಲ ತತ್ವದಿಂದ ಕೂಡಿರಬೇಕು. ಆಗ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.

ಶಿವಶರಣರು ನುಡಿದಂತೆ ನಡೆದವರು. ಸ್ತ್ರೀ ಸಮಾನತೆ ಮತ್ತು ಅನುಭಾವ ಸಿದ್ಧಿಯನ್ನು ಬೋಧಿಸಿದ್ದರು. ಮನುಷ್ಯನಿಗೆ ಇಂದು ಯಾವುದು ಬೇಡವಾಗಿದೆಯೋ ಅದು ಹತ್ತಿರವಾಗುತ್ತಿದೆ. ಯಾವುದು ಬೇಕಾಗಿದೆಯೋ ಅದು ದೂರವಾಗುತ್ತಿರುವುದು ವಿಪರ್ಯಾಸ ಎಂದರು.

ಮಂಗಳವಾರ ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಜಂಗಮ ಪಾದಪೂಜೆ, ದುಂಡಸಿ ವಿರಕ್ತಮಠದ ಶ್ರೀ ಕುಮಾರ ಸ್ವಾಮೀಜಿ ಅವರಿಂದ ಷಟ್‌ಸ್ಥಲ ಧ್ವಜಾರೋಣ ನೇರವೇರಿತು. ಸಂತವಳ್ಳಿ ಬಸವರಾಜ ಗೌಡ, ರುದ್ರಗೌಡ ದಾಸೋಹ ಸೇವೆ ನಡೆಸಿಕೊಟ್ಟರು. ಶಾಲಾ ಕಾಲೇಜು ಮಕ್ಕಳಿಂದ ಭಾವಸಂಗಮ ಕಾರ್ಯಕ್ರಮ ನಡೆಯಿತು. ಸಂಜೆ ಗವಿಸಿದ್ಧೇಶ್ವರ ಶಾಸ್ತ್ರಿಗಳು ಮಂಗಳ ನುಡಿಗಳನ್ನಾಡಿದರು. ಚೌಡೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿತು.

ಜಡೆ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಮತ್ತು ಮೂಡಿ ವಿರಕ್ತಮಠ ಶ್ರೀ ಸದಾಶಿವ ಮಹಾಸ್ವಾಮಿ ಆಶೀರ್ವಚನ ನೀಡಿದರು. ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಶ್ರೀ ಕುಮಾರ ಮಹಾಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಗಂಗಾಧರ ದೇವರು, ಅನ್ನಪೂರ್ಣಾ, ಗುರುಪ್ರಸಾದ್, ಜಗದೀಶ್ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net