

ಜರ್ಮನಿ: ಮಹಾಮಾರಿ ಕರೊನಾ ಜಗತ್ತಿನೆಲ್ಲೆಡೆ ಮರಣಮೃದಂಗ ಬಾರಿಸುತ್ತಿದ್ದರೂ, ಸರ್ಕಾರಗಳ ಎಚ್ಚರಿಕೆಯ ನಡುವೆಯೂ ಕೆಲವು ಜನರಿಗೆ ಬುದ್ಧಿ ಬರುತ್ತಿಲ್ಲ. ರಸ್ತೆಗೆ ಇಳಿಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು, ಗುಂಪು ಸೇರುವುದು ಇತ್ಯಾದಿಗಳನ್ನು ಮಾಡುತ್ತಲೇ ಇದ್ದಾರೆ.
ಭಾರತ ಮಾತ್ರವಲ್ಲದೇ, ಈ ಸಮಸ್ಯೆ ಜರ್ಮನಿಯನ್ನೂ ಬಿಟ್ಟಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನರು ಅಡ್ಡಾದಿಡ್ಡಯಾಗಿ ಓಡಾಡುತ್ತಿರುವುದನ್ನು ತಡೆಗಟ್ಟಲು ಜರ್ಮನಿ ಸರ್ಕಾರ ‘ದಂಡಂ ದಶಗುಣಂ’ ಎನ್ನುವ ಮಾರ್ಗ ಅನುಸರಿಸಿದೆ. ಇಬ್ಬರು ಅತ್ಯಂತ ಸಮೀಪದಲ್ಲಿ ಓಡಾಡುವುದನ್ನು ಕಂಡರೆ 500 ಯುರೋ (ಸುಮಾರು 41 ಸಾವಿರ ರೂಪಾಯಿ) ದಂಡ ವಿಧಿಸಲು ಮುಂದಾಗಿದೆ.
ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಈ ಕುರಿತು ಆದೇಶ ಹೊರಡಿದ್ದು, ಅನಗತ್ಯ ಒಟ್ಟೊಟ್ಟಿಗೆ ತಿರುಗಾಡುವವರಿಗೆ ಕಡ್ಡಾಯವಾಗಿ ದಂಡ ವಿಧಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ. ಕನಿಷ್ಠ ಐದು ಅಡಿ (ಒಂದೂವರೆ ಮೀಟರ್) ಅಂತರವನ್ನು ಕಾಯ್ದುಕೊಳ್ಳದೇ ಇದ್ದವರು ಎಲ್ಲಿಯೇ ಕಂಡರೂ ಸ್ಥಳದಲ್ಲಿಯೇ ದಂಡ ವಿಧಿಸುವಂತೆ ಅವರು ನಿರ್ದೇಶಿಸಿದ್ದಾರೆ.
ಜರ್ಮನಿಯಲ್ಲಿ ಈಗಾಗಲೇ 80 ಸಾವಿರಕ್ಕೂ ಅಧಿಕ ಮಂದಿ ಕರೊನಾ ವೈಸರ್ ಸೋಂಕಿತರಾಗಿದ್ದರೆ ಈ ವೈರಸ್ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಅಗತ್ಯ ಸಾಮಗ್ರಿಗಳನ್ನು ತರುವುದಕ್ಕೆ ಮನೆಯಿಂದ ಹೊರಬರಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಲ್ಲಿಯೂ ನಿಯಮ ಮೀರಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಕಾರಣ, ವೈರಸ್ ಅತಿ ವೇಗದಲ್ಲಿ ಹರಡುತ್ತಿರುವುದರಿಂದ ಇಂಥದ್ದೊಂದು ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಕ್ವಾರಂಟೈನ್ ಉಲ್ಲಂಘಿಸಿ ಹೊರ ಬರುವವರನ್ನು ಕಂಡಲ್ಲಿ ಗುಂಡಿಕ್ಕುವಂತೆ ಫಿಲಿಪ್ಪೀನ್ಸ್ ಅಧ್ಯಕ್ಷರು ಆದೇಶಿಸಿದ್ದರು. (ಏಜೆನ್ಸೀಸ್)