ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ; ಕುಂತಿ ಬೋಪಯ್ಯ

index15
Published on

ಮಡಿಕೇರಿ: ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಮಕ್ಕಳು ಕೂಡ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಕೂಡಿಗೆ ಸೈನಿಕ ಶಾಲೆಯ ನಿವತ್ತ ಪ್ರಾಂಶುಪಾಲೆ ಕುಂತಿಬೋಪಯ್ಯ ಹೇಳಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಐವರು ಶಿಕ್ಷಕರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕುಂತಿಬೋಪಯ್ಯ, ಭವಿಷ್ಯದ ಪ್ರಜೆಗಳು ದೇಶದ ಪ್ರಗತಿಯಲ್ಲಿ ಶಿಕ್ಷಣ ಮಹತ್ವದ ಸ್ಥಾನ ಪಡೆದಿದೆ. ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಮಕ್ಕಳು ಕೂಡ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಪ್ರತೀಯೋರ್ವ ವಿದ್ಯಾರ್ಥಿಗಳಲ್ಲಿಯೂ ಇರುವ ಸುಪ್ತ ಪ್ರತಿಭೆ ಹೊರತರಲು ಶಿಕ್ಷಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಮಹತ್ತರ ಹೊಣೆಯಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಮೂಲಕ ಉತ್ತಮ ಸಮಾಜ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಮಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯ, ಅಭಿರುಚಿ ಗುರುತಿಸಿ ಶಿಕ್ಷಕರು ಮುಖ್ಯವಾಹಿನಿಗೆ ಕರೆತರುತ್ತಾರೆ. ಏನೂ ಅರಿಯದ ಮುಗ್ದ ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಸರಿಸಾಟಿಯಿಲ್ಲದ್ದು. ಹೀಗಿದ್ದರೂ ಶಿಕ್ಷಕರ ಬಗ್ಗೆ ಮಕ್ಕಳಲ್ಲಿ ಹಿಂದೆ ಇದ್ದ ಗೌರವ ಈಗ ನಿಧಾನವಾಗಿ ಕಡಮೆಯಾಗುತ್ತಿದೆ. ಗುರುಭ್ಯೋನಮ ಎಂಬ ಕಾಲದಿಂದ ಗುರುವೇನು ಮಹಾ ಎಂಬ ಕಾಲ ಈಗ ಬಂದಿದೆ ಎಂದು ಕುಂತಿಬೋಪಯ್ಯ ವಿಷಾಧಿಸಿದರು.
ಕೂಡಿಗೆ ಕ್ರೀಡಾಶಾಲೆಯಲ್ಲಿ ೩೫ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹಂಚಿಕೊಂಡ ಕುಂತಿಬೋಪಯ್ಯ, ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಕ್ರೀಡಾಶಾಲೆಯಲ್ಲಿ ಮಹತ್ವ ನೀಡಲಾಗಿತ್ತು. ಹೀಗಾಗಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇಲ್ಲಿನ ಕ್ರೀಡಾಪಟುಗಳು ಸಾಧನೆ ಮಾಡಿರುವುದಲ್ಲದೇ ಶೈಕ್ಷಣಿಕವಾಗಿಯೂ ಕ್ರೀಡಾಶಾಲೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿತ್ತು ಎಂಬುದು ಸಾರ್ಥಕ ಭಾವನೆಗೆ ಕಾರಣವಾಗಿದೆ ಎಂದು ಸ್ಮರಿಸಿದರು.
ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ.ಮಾತನಾಡಿ, ಶಿಕ್ಷಕರು ಹಣತೆ ಇದ್ದಂತೆ. ಹಣತೆಯೊಂದು ನೂರಾರು ದೀಪ ಬೆಳಗಿಸುವಂತೆ ಶಿಕ್ಷಕರ ಪ್ರತಿಭೆ ನೂರಾರು ವಿದ್ಯಾರ್ಥಿಗಳ ಪ್ರತಿಭೆ ಬೆಳಗಿಸಲು ಕಾರಣವಾಗುತ್ತದೆ. ರೋಟರಿ ಸಂಸ್ಥೆ ಸೆಪ್ಟೆಂಬರ್ ತಿಂಗಳನ್ನು ಶಿಕ್ಷಣ ರಂಗಕ್ಕೆ ಮೀಸಲಿಟ್ಟಿದ್ದು ಸಮಾಜದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಈ ತಿಂಗಳು ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಅಂತರರಾಷ್ಟ್ರೀಯ ರೋಟರಿ ಅಧ್ಯಕ್ಷ ಶೇಖರ್ ಮೆಹ್ತಾ, ಸ್ವಚ್ಚ್ ಭಾರತ್ ಮಾದರಿಯಲ್ಲಿಯೇ ಸಾಕ್ಷರ್ ಭಾರತ್ ಎಂಬ ಯೋಜನೆಗೆ ನಾಂದಿ ಹಾಡುತ್ತಿದ್ದು ೩ ವರ್ಷದೊಳಗೆ ರೋಟರಿ ಮೂಲಕ ಭಾರತದಾದ್ಯಂತ ಪ್ರತೀ ಪ್ರಜೆಯೂ ಸಾಕ್ಷರಸ್ಥನಾಗಬೇಕೆಂಬ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಶೇಖರ್ ಮೆಹ್ತಾ ಚರ್ಚಿಸಿದ್ದು ಶೀಘ್ರವೇ ಸಾಕ್ಷರ್ ಭಾರತ್ ಯೋಜನೆ ಜಾರಿಗೊಳ್ಳಲಿದೆ ಎಂದು ಅನಿಲ್ ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಿಸ್ಟಿ ಹಿಲ್ಸ್ ನಗರ ಮತ್ತು ಗ್ರಾಮೀಣ ಭಾಗದ ಶಿಕ್ಷಕರನ್ನು ಗುರುತಿಸಿ ಪ್ರತಿಷ್ಟಿತ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಶಿಕ್ಷಣಕ್ಕೆ ಸದಾ ಆದ್ಯತೆ ನೀಡುತ್ತಿರುವ ರೋಟರಿ ಈ ತಿಂಗಳಿನಲ್ಲಿ ಸರ್ಕಾರಿ ಶಾಲೆಗಳ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಪ್ರಯೋಜನಾಗಬಲ್ಲ ವಿದ್ಯಾಸೇತು ಹೆಸರಿನ ಮಾರ್ಗದರ್ಶಿ ಪುಸ್ತಕ ವಿತರಿಸುತ್ತಿದೆ. ತಮ್ಮ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಗುರುವನ್ನು ಸದಾ ವಿದ್ಯಾರ್ಥಿಗಳು ಸ್ಮರಿಸುತ್ತಿರಬೇಕೆಂದೂ ಹೇಳಿದರು.
ಕಾರ್ಯಕ್ರಮದಲ್ಲಿ ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್, ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಕೆ.ಡಿ.ದಯಾನಂದ್, ಪ್ರಮೋದ್ ಕುಮಾರ್ ರೈ, ಡಾ.ಕುಶ್ವಂತ್ ಕೋಳಿಬೈಲು, ರಶ್ಮಿ ದೀಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net