ಹೆಕ್ಕಿದ್ದು ಮುತ್ತಾದರೆ ಉಳಿದದ್ದು ಸಾಗರ...

Untitled design
Published on

ಮೂರನೇ ತರಗತಿಯ ಪಠ್ಯ ಪುಸ್ತಕದಲ್ಲಿ ನಾನು ರಚಿಸಿದ ‘ಕೊಕ್ಕರೆಯ ಪ್ರಾರ್ಥನೆ’ ಎಂಬ ಕವಿತೆ ಇದೆ. ಮಕ್ಕಳು ಅದನ್ನು ಖುಷಿಯಿಂದ ಓದುವ ವಿಡಿಯೋ ನೋಡಿದಾಗ ನನಗೆ ತುಂಬ ಸಂತೋಷವಾಗುತ್ತದೆ. ನಾನು ಶಾಲೆಯಲ್ಲಿ ಪಠ್ಯ ಪುಸ್ತಕದ ಪದ್ಯಗಳನ್ನು ರಾಗವಾಗಿ ಓದುತ್ತಿದ್ದ ದಿನಗಳು ನೆನಪಾಗುತ್ತವೆ. ಆ ಪದ್ಯಗಳು ನನಗೆ ಅದೆಷ್ಟು ಖುಷಿ ಕೊಡುತ್ತಿದ್ದವು ಅಂದರೆ ನಾನೂ ಅಂತಹ ಪದ್ಯಗಳನ್ನು ಬರೆಯಬೇಕು ಅನ್ನಿಸುವಷ್ಟು. ನಾನು ಹಾಗೆ ಪದ್ಯಗಳು ಅಂತ ಬರೆದದ್ದನ್ನು ಅಧ್ಯಾಪಕರು ಮೆಚ್ಚಿ ಪೋ›ತ್ಸಾಹಿಸಿದರು. ಅಪ್ಪಯ್ಯ, ಅಮ್ಮ, ಅಕ್ಕಂದಿರು ಸಹಾ ‘ನಮ್ಮ ಡುಂಡಿ ಮಾಣಿ ಪದ್ಯ ಲಾಯ್್ಕ ಬರಿತ ಕಾಣಿ’ ಎಂದು ಸಂಭ್ರಮಿಸಿದರು. ಪರಿಣಾಮವಾಗಿ ನಾನು ಇನ್ನಷ್ಟು ಮತ್ತಷ್ಟು ಬರೆದೆ. ಶಾಲಾ ದಿನಗಳಲ್ಲಿ ಕಾವ್ಯ ರಚನೆಯನ್ನು ಒಂದು ಆಟದಂತೆ ಆರಂಭಿಸಿದ ನನಗೆ ಮುಂದೊಂದು ದಿನ ನಾನು ಬರೆದ ಪದ್ಯಗಳು ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳ್ಳಬಹುದು ಎಂಬ ಕಲ್ಪನೆ ಇರಲಿಲ್ಲ.

ನಾನು ಬಾಲ್ಯದಲ್ಲೇ ಕಾವ್ಯದತ್ತ ಆಕರ್ಷಿತನಾಗಲು ಇನ್ನೊಂದು ಕಾರಣ ನಮ್ಮ ಊರಿನ ಗಣಪತಿ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ಭಜನಾ ಕಾರ್ಯಕ್ರಮ. ಅಲ್ಲಿ ಒಂದಿಷ್ಟು ಮಕ್ಕಳು, ದೊಡ್ಡವರು ತಾಳ ಬಾರಿಸುತ್ತ ‘ಅಂಬಿಗಾ ನಾ ನಿನ್ನ ನಂಬಿದೆ’, ‘ಮಾಡು ಸಿಕ್ಕದಲ್ಲಾ’ ಮುಂತಾದ ದಾಸರ ಕೀರ್ತನೆಗಳನ್ನು ಹಾಡುತ್ತಿದ್ದರು. ನಾನೂ ಆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನದೇ ಧಾಟಿಯಲ್ಲಿ ಹಾಡುತ್ತಿದ್ದೆ. ಯಾರೂ ‘ನೀನು ಹಾಡಬೇಡ. ನಿನ್ನ ಶ್ರುತಿ ಸರಿ ಇಲ್ಲ’ ಅನ್ನುತ್ತಿರಲಿಲ್ಲ! ನಾನು ಹಾಡುತ್ತಿದ್ದ ಕೀರ್ತನೆಗಳ ಲಯ, ಪ್ರಾಸ ನನಗೆ ಖುಷಿಕೊಡುತ್ತಿದ್ದವು. ಅವುಗಳ ಪ್ರಭಾವದಿಂದ ನಾನು ನಮ್ಮ ಊರಿನ ಬಗ್ಗೆ

ಹಟ್ಟಿಕುದುರು ನಮ್ಮ ಊರು/ ಬೆಳೆಯುತಿರುವ ಹಳ್ಳಿಯು

ಮರವು ಸಿಗದೆ ಅತ್ತ ಇತ್ತ/ ಬಳುಕುತಿರುವ ಬಳ್ಳಿಯು

ಎಂದು ಆರಂಭವಾಗುವ ಹಾಡು ಬರೆದಿದ್ದೆ.

ನಾನು ಹದಿನಾರನೇ ವಯಸ್ಸಿನವರೆಗಿನ ನನ್ನ ಬಾಲ್ಯವನ್ನು ಕಳೆದದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಕುದುರು ಎಂಬ ಪುಟ್ಟ ಹಳ್ಳಿಯಲ್ಲಿ. ಅಲ್ಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿತ್ತಾದರೂ ವಿದ್ಯುತ್ತು, ರಸ್ತೆ, ಶೌಚಗೃಹ ಮುಂತಾದ ಮೂಲಭೂತ ಸೌಕರ್ಯಗಳು ಇರಲಿಲ್ಲ. ಸುತ್ತಲೂ ನದಿಯಿದ್ದದ್ದರಿಂದ ಎಲ್ಲಿಗೆ ಹೋಗಬೇಕಾದರೂ ‘ಅಂಬಿಗಾ ನಾ ನಿನ್ನ ನಂಬಿದೆ’ ಎನ್ನುತ್ತ ದೋಣಿ ಪ್ರಯಾಣ ಮಾಡುವುದು ಅನಿವಾರ್ಯವಾಗಿತ್ತು. ನಮ್ಮ ಊರಿನಲ್ಲಿ ಗ್ರಂಥಾಲಯವಿರಲಿಲ್ಲ. ಪತ್ರಿಕೆಗಳೂ ಬರುತ್ತಿರಲಿಲ್ಲ. ಹೀಗಾಗಿ ಪತ್ರಿಕೆಯಲ್ಲಿ ನನ್ನ ಕವನ ಪ್ರಕಟವಾದ ಸಂಗತಿ ಎಷ್ಟೋ ದಿನಗಳ ನಂತರ ಬೇರೆಯವರು ಹೇಳಿದಾಗ ತಿಳಿಯುತ್ತಿತ್ತು. ಆದರೂ ಕವನ ಬರೆಯುವುದು, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ ಇತ್ಯಾದಿಗಳಲ್ಲಿ ಭಾಗವಹಿಸುವುದು ನನಗೆ ಪ್ರಿಯವಾದ ಹವ್ಯಾಸವಾಗಿತ್ತು.

ಕಾಲೇಜು ಶಿಕ್ಷಣಕ್ಕಾಗಿ ನಾನು ಬೆಂಗಳೂರಿನಲ್ಲಿದ್ದ ಶಿವರಾಮ ಅಣ್ಣಯ್ಯನ ಮನೆಗೆ ಬಂದೆ. ಪಿಯುಸಿಯಲ್ಲಿ ಒಳ್ಳೆಯ ಅಂಕ ಗಳಿಸಿ ಪದವಿ ವ್ಯಾಸಂಗಕ್ಕಾಗಿ ಕೃಷಿ ಕಾಲೇಜಿಗೆ ಸೇರಿಕೊಂಡೆ. ಸಾಹಿತ್ಯ ಪ್ರಿಯನಾಗಿದ್ದ ಅಣ್ಣಯ್ಯನ ಮನೆಯಲ್ಲಿ ಆ ಕಾಲದ ಉತ್ತಮ ಸಾಹಿತ್ಯ ಕೃತಿಗಳಿದ್ದವು. ನನ್ನ ಬಿಡುವಿನ ವೇಳೆಯಲ್ಲಿ ಅವುಗಳನ್ನು ಆಸಕ್ತಿಯಿಂದ ಓದುತ್ತಿದ್ದೆ. ಅದು ನವ್ಯ ಕಾವ್ಯದ ಕಾಲ. ಅಡಿಗರ ಸಂಕೀರ್ಣ ಕವನಗಳು ನನಗೆ ಅರ್ಥವಾಗುತ್ತಿರಲಿಲ್ಲ. ಆದರೆ ಅವರ ವ್ಯಂಗ್ಯ, ವಿಡಂಬನೆಯ ಕವನಗಳು ಇಷ್ಟವಾಗುತ್ತಿದ್ದವು. ನಿಸಾರ್ ಅಹಮದರ ಕವನಗಳಿಂದ ಪ್ರಭಾವಿತನಾಗಿ ನಾನೂ ನವ್ಯ ಕವನಗಳನ್ನು ಬರೆಯತೊಡಗಿದೆ. ಅವುಗಳನ್ನು ಪತ್ರಿಕೆಗಳಿಗೆ ಕಳಿಸಿದಾಗ ಪ್ರಕಟವಾಗದೆ ವಿಷಾದ ಪತ್ರದೊಂದಿಗೆ ವಾಪಾಸು ಬರುತ್ತಿದ್ದವು. ಆ ಸಮಯದಲ್ಲಿ ನಾನು ಬರೆದ ಕೆಲವು ಮಕ್ಕಳ ಪದ್ಯಗಳು ಪತ್ರಿಕೆಗಳಲ್ಲಿ ಪ್ರಕಟವಾದ್ದರಿಂದ ಪ್ರೌಢ ಕವನಗಳ ಬದಲು ಮಕ್ಕಳ ಕವನಗಳನ್ನು ಬರೆಯುವುದೇ ಉತ್ತಮ ಅನ್ನಿಸಿತ್ತು. ಆದರೆ ಮುಖದಲ್ಲಿ ಮೀಸೆ ಮೂಡಿದ ನಂತರವೂ ಶಿಶು ಗೀತೆ ಬರೆಯುತ್ತಿದ್ದಾನೆಂದು ಸ್ನೇಹಿತರು ತಮಾಷೆ ಮಾಡುತ್ತಿದ್ದರು. ಹೀಗಾಗಿ ಪತ್ರಿಕೆಗಳ ವಿಷಾದ ಪತ್ರಕ್ಕೆ ಅಂಜದೆ ನವ್ಯ ಕವನಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸುವುದನ್ನು ಮುಂದುವರಿಸಿದೆ.

ಬರೆದದ್ದನ್ನು ಪ್ರಕಟಿಸಲು ಈಗ ಮುದ್ರಿತ ಪತ್ರಿಕೆಗಳ ಜೊತೆಗೆ ಅಂತರ್ಜಾಲ ಪತ್ರಿಕೆಗಳು, ಬ್ಲಾಗ್, ಫೇಸ್​ಬುಕ್ ಮುಂತಾದ ಹಲವಾರು ಮಾಧ್ಯಮಗಳು ಸುಲಭದಲ್ಲಿ ಸಿಗುತ್ತವೆ. ವಾಟ್ಸ್ ಆಪ್ ಮೂಲಕವೂ ಬರಹಗಳನ್ನು ಹಂಚಿಕೊಳ್ಳಬಹುದು. ನಾನು ಬರವಣಿಗೆ ಆರಂಭಿಸಿದ ಕಾಲದಲ್ಲಿ ಇಷ್ಟೆಲ್ಲ ಅವಕಾಶಗಳು ಇರಲಿಲ್ಲ. ಉದಯೋನ್ಮುಖ ಲೇಖಕರಿಗೆ ಪತ್ರಿಕೆಗಳಿಂದ ಸ್ವೀಕೃತಿ ಪತ್ರಗಳಿಗಿಂತ ಹೆಚ್ಚು ವಿಷಾದ ಪತ್ರಗಳು ಬರುತ್ತಿದ್ದವು. ಅನೇಕರು ಬೇಸರದಿಂದ ಬರೆಯುವ ಹವ್ಯಾಸವನ್ನೇ ತೊರೆಯುತ್ತಿದ್ದರು.

ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ನಾನು ಓದಿದ್ದು ಪಿ.ಯು.ಸಿ.ವರೆಗೆ ಮಾತ್ರ. ಪದವಿಗಾಗಿ ನಾನು ಓದಿದ ಕೃಷಿ ವಿಜ್ಞಾನದ ಪಠ್ಯಕ್ರಮದಲ್ಲಿ ಕನ್ನಡ ಭಾಷೆ ಅಥವಾ ಸಾಹಿತ್ಯ ಇದ್ದಿರಲಿಲ್ಲ. ಕೃಷಿ ವಿಜ್ಞಾನವನ್ನು ನಾನು ಓದಿದ್ದು ಕೃಷಿಯ ಮೇಲಿನ ಆಸಕ್ತಿಯಿಂದಲ್ಲ. ಬಂಧುಮಿತ್ರರ ಸಲಹೆಯಂತೆ ಬೇಗ ಕೆಲಸ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ! ಅದೃಷ್ಟವಶಾತ್ ಕೃಷಿ ಕಾಲೇಜಿನಲ್ಲಿ ನನಗೆ ಸಾಹಿತ್ಯದಲ್ಲಿ ಆಸಕ್ತಿಇದ್ದ ಹಲವು ಗೆಳೆಯರು ಸಿಕ್ಕರು. ನಾವೆಲ್ಲರೂ ಸೇರಿ ಒಂದು ಕೈ ಬರಹದ ಪತ್ರಿಕೆಯನ್ನು ಪ್ರಕಟಿಸ ತೊಡಗಿದೆವು. ಅದರ ಸಂಪಾದಕ ನಾನೇ ಆದ್ದರಿಂದ ವಿಷಾದ ಪತ್ರದ ಭಯವಿರಲಿಲ್ಲ! ಕವನದ ಜೊತೆಗೆ ಅಂಕಣ, ನಗೆ ಬರಹ, ಕತೆ ಇತ್ಯಾದಿಗಳನ್ನು ಬೇರೆ ಬೇರೆ ಹೆಸರುಗಳಿಂದ ಬರೆಯುತ್ತಿದ್ದೆ. ನಮ್ಮ ಕಾಲೇಜಿನಲ್ಲಿದ್ದ ಎಚ್.ಎ.ರಾಮಕೃಷ್ಣ ಎಂಬ ಇಂಗ್ಲಿಷ್ ಅಧ್ಯಾಪಕರು ಸ್ವತಃ ಲೇಖಕರಾಗಿದ್ದರು. ಅವರು ನನ್ನ ಬರವಣಿಗೆಯನ್ನು ಮೆಚ್ಚಿ ಪೋ›ತ್ಸಾಹಿಸಿದರು. ಅವರ ಸಲಹೆಯಂತೆ ನಾವು ಕಾಲೇಜಿನಲ್ಲಿ ಅಡಿಗರ ನಿರ್ದೇಶನದಲ್ಲಿ ಒಂದು ಕಾವ್ಯ ಕಮ್ಮಟ ಏರ್ಡಿಸಿದ್ದೆವು.

1980ರಲ್ಲಿ ನನಗೆ ಮಂಗಳೂರಿನಲ್ಲಿದ್ದ ರಾಷ್ಟ್ರೀಕೃತ ಕಾರ್ಪೆರೇಶನ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಕೃಷಿ ಅಧಿಕಾರಿಯ ಉದ್ಯೋಗ ದೊರಕಿತು. ಅಲ್ಲಿ ಸುಮಾರು ಆರು ವರ್ಷಗಳ ಕಾಲ ನನ್ನ ಬಿಡುವಿನ ವೇಳೆಯನ್ನೆಲ್ಲ ಸಾಹಿತ್ಯ ಹಾಗೂ ನಾಟಕಕ್ಕೆ ಮೀಸಲಾಗಿಟ್ಟೆ. ಮಂಗಳೂರಿನಲ್ಲಿ ನನಗೆ ಪರಿಚಿತರಾದ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿಯವರು (ನಾದಾ) ನಾನು ಬರೆದ ಮೊದಲ ನಾಟಕ ‘ಓಡುವವರು’ ರಂಗದ ಮೇಲೆ ಬರಲು ಕಾರಣರಾದರು. ನಂತರ 1981ರಲ್ಲಿ ಅವರೇ ಅದನ್ನು ಪ್ರಕಟಿಸಿದರು. ಆ ವೇಳೆಗೆ ನನ್ನ ಹಲವು ಕವನಗಳು ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಒಂದು ಸಂಕಲನಕ್ಕೆ ಆಗುವಷ್ಟು ಕವಿತೆಗಳು ಇದ್ದರೂ ಪುಸ್ತಕರೂಪದಲ್ಲಿ ಪ್ರಕಟಿಸಲು ಪ್ರಕಾಶಕರನ್ನು ಹೇಗೆ ಸಂರ್ಪಸುವುದು ಎಂದು ಯೋಚಿಸುತ್ತಿರುವಾಗ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದವರು ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗಾಗಿ ಕವನ ಸಂಕಲನದ ಹಸ್ತಪ್ರತಿಗಳನ್ನು ಆಹ್ವಾನಿಸಿರುವ ಸಂಗತಿ ತಿಳಿಯಿತು. ನಿರೀಕ್ಷೆ ಇಟ್ಟುಕೊಳ್ಳದೆ ಕಳುಹಿಸಿದೆ. ಪ್ರಶಸ್ತಿ ಬಂತು. ಕವನ ಸಂಕಲನವನ್ನು ತಮ್ಮ ಸ್ಪಟಿಕ ಪ್ರಕಾಶನದಿಂದ ಪ್ರಕಟಿಸುವುದಾಗಿ ಸಾಹಿತಿ ಡಾ.ಜಯಪ್ರಕಾಶ ಮಾವಿನಕುಳಿ ಪತ್ರ ಬರೆದರು. ಹೀಗೆ 1982ರಲ್ಲಿ ನನ್ನ ಮೊದಲ ಕವನ ಸಂಕಲನ ‘ನಮ್ಮ ಗೋಡೆಯ ಹಾಡು’ ಪ್ರಕಟವಾಗಿ ಕಾವ್ಯಾಸಕ್ತರ ಗಮನ ಸೆಳೆಯಿತು.

ಈಗ ಹನಿಗವನಗಳಿಂದಲೇ ನನ್ನನ್ನು ಗುರುತಿಸುವವರಿಗೆ ನನ್ನ ಮೊದಲ ಹನಿಗವನ ಸಂಕಲನ ‘ಪಾಡ್ಯ ಬಿದಿಗೆ ತದಿಗೆ’ ಪ್ರಕಟವಾದದ್ದು 1985ರಲ್ಲಿ ಅಂದರೆ ಅಚ್ಚರಿ ಅನ್ನಿಸಬಹುದು. ಅದಕ್ಕೆ ಪ್ರಕಾಶಕರು ಸಿಗಲಿಲ್ಲವಾದ್ದರಿಂದ ಈಗಿಲ್ಲದ ನನ್ನ ಮಿತ್ರ ಗೌತಮ ಘಾಟೆಯ ಪಾಲುದಾರಿಕೆಯಲ್ಲಿ ನಾನೇ ಪ್ರಕಟಿಸುವುದು ಅನಿವಾರ್ಯವಾಯಿತು. ಪ್ರಕಾಶನಕ್ಕೆ ‘ಅನಿವಾರ್ಯ ಪ್ರಕಾಶನ’ ಎಂದೇ ಹೆಸರಿಟ್ಟಿದ್ದೆ! ಹನಿಗವನಗಳ ಪ್ರತ್ಯೇಕ ಸಂಕಲನ ತರುವಂತೆ ಸಲಹೆ ನೀಡಿದ ಕವಿ ಮಿತ್ರ ಬಿ.ಆರ್. ಲಕ್ಷ್ಮಣರಾವ್ ಅದಕ್ಕೊಂದು ಚಂದದ ಮುನ್ನುಡಿ ಬರೆದದ್ದಲ್ಲದೆ ಹತ್ತು ಪ್ರತಿಗಳನ್ನು ಮಾರಾಟ ಮಾಡಿಕೊಟ್ಟಿದ್ದರು.

ಸಾಹಿತ್ಯ ಲೋಕದಲ್ಲಿ ನನ್ನ ಗುರುಗಳು ಒಬ್ಬಿಬ್ಬರಲ್ಲ. ನಾನು ಓದಿದ ಎಲ್ಲ ಒಳ್ಳೆಯ ಕೃತಿಗಳಿಂದಲೂ ಪ್ರಭಾವಿತನಾಗಿದ್ದೇನೆ. ಚೆನ್ನಾಗಿಲ್ಲದ ಪುಸ್ತಕಗಳಿಂದ ಹೇಗೆ ಬರೆಯಬಾರದು ಎಂಬುದನ್ನು ಕಲಿತಿದ್ದೇನೆ. ನನಗಿಂತ ಹಿರಿಯರಾದ ಸುಬ್ರಾಯ ಚೊಕ್ಕಾಡಿ, ಎಚ್ಚೆಸ್ವಿ, ಬಿ ಆರ್ ಎಲ್, ಈಗಿಲ್ಲದ ಸುಮತೀಂದ್ರ ನಾಡಿಗ, ಕಿ.ರಂ. ಮುಂತಾದವರೊಂದಿಗೆ ನಡೆಸಿದ ಮಾತುಕತೆಯಿಂದ ನನ್ನ ಬರವಣಿಗೆಯನ್ನು ತಿದ್ದಿಕೊಂಡಿದ್ದೇನೆ. ನನ್ನ ಸಾಹಿತ್ಯ ಹೆಚ್ಚು ಜನರಿಗೆ ತಲುಪಲು ನನ್ನಿಂದ ಅಂಕಣ ಬರೆಸಿದ ಪತ್ರಿಕೆಗಳು, ಪ್ರಸಾರ ಮಾಡಿದ ಆಕಾಶವಾಣಿ ಹಾಗೂ ಟಿ.ವಿ. ಮಾಧ್ಯಮ ಕಾರಣ ಎಂಬುದನ್ನು ನಾನು ಮರೆಯಲಾರೆ.

ಆರಂಭದಲ್ಲಿ-

ಬರೆದೂ ಬರೆದೂ ಕನ್ನಡ ಕವನ

ಪಡೆದೆನು ಕನ್ನಡಕವನ್ನ!

ಎಂದು ಸಾಹಿತ್ಯದಿಂದಾದ ಲಾಭದ ಬಗ್ಗೆ ವ್ಯಂಗ್ಯವಾಗಿ ಬರೆದ ನಾನೇ ಹಲವು ದಶಕಗಳ ನಂತರ-

ಕನ್ನಡದ ಕನ್ನಡಕ ಹಾಕಿಕೊಂಡೆ/ ಎಲ್ಲೆಲ್ಲೂ ಕಾಣಿಸಿತು ಚೆಲುವು

ಕನ್ನಡದ ಪೆನ್ನಲ್ಲಿ ಬಣ್ಣಿಸಿದೆನು/ ಕವಿಯೆಂದು ಕರೆದಿರಿ ನೀವು!

ಎಂದು ಓದುಗರಿಗೆ ಧನ್ಯತಾಭಾವದಿಂದ ನಮಿಸಿದ್ದೇನೆ.

ಮೆಟ್ರೋದಲ್ಲಿ ನನ್ನನ್ನು ಗುರುತಿಸಿ ಸೆಲ್ಪಿ ತೆಗೆದುಕೊಂಡು ಸೀಟುಕೊಟ್ಟವರು, ನನ್ನ ಹೆಸರು ಹೇಳಿದಾಗ ಸಿಗ್ನಲ್ ಜಂಪ್ ಮಾಡಿದ ಅಪರಾಧವನ್ನು ಕ್ಷಮಿಸಿದ ಪೊಲೀಸರು, ಹಲವು ದೇಶಗಳಿಗೆ ಹಲವಾರು ಬಾರಿ ನನ್ನನ್ನು ಕರೆಸಿಕೊಂಡು ಸತ್ಕರಿಸಿದ ಅನಿವಾಸಿಗಳು... ಹೀಗೆ ಸಾಹಿತ್ಯದಿಂದ ಒದಗಿದ ಸಿಹಿ ಪ್ರಸಂಗಗಳು ಲೆಕ್ಕವಿಲ್ಲದಷ್ಟು. ಕವನದ ಧ್ವನಿಯನ್ನು ಗ್ರಹಿಸಲಾಗದ ಸಂಪ್ರದಾಯಸ್ಥರಿಂದ ಬೈಸಿಕೊಂಡ ಕಹಿ ಘಟನೆಗಳೂ ಇವೆ. ಕಹಿಗಿಂತ ಸಿಹಿಯೇ ಹೆಚ್ಚಾಗಿರುವುದು ನನ್ನ ಅದೃಷ್ಟ. ನನ್ನ ಹುಟ್ಟು, ಶಿಕ್ಷಣ, ಉದ್ಯೋಗ ಇತ್ಯಾದಿ ಲೌಕಿಕ ಸಂಗತಿಗಳೆಲ್ಲವೂ ಆಕಸ್ಮಿಕ ಅಥವಾ ಚಿಢ ್ಚಚ್ಞ್ಚ. ಆದರೆ ನಾನು ಕವಿಯಾದದ್ದು ಮಾತ್ರ ಚಿಢ ್ಚಟಜ್ಚಿಛಿ. ಸಾಹಿತ್ಯ ಮುಖ್ಯವಾಗಿ ಒಂದು ಸಂವಹನ ಮಾಧ್ಯಮ. ಅದು ಪರಿಣಾಮಕಾರಿಯಾಗಬೇಕಾದರೆ ಸರಳವಾಗಿರಬೇಕು ಮತ್ತು ಗಮನ ಸೆಳೆಯುವಂತಿರಬೇಕು ಎಂಬುದು ನನ್ನ ನಂಬಿಕೆ. ನಮ್ಮ ಬರವಣಿಗೆ ಸಮಾಜದ ಉನ್ನತಿಗೆ ಸಹಾಯಕವಾಗಿರಬೇಕೇ ವಿನಃ ಮಾರಕವಾಗಿರಬಾರದು ಎಂಬ ಎಚ್ಚರಿಕೆಯಿಂದ ನಾನು ಕಳೆದ ಐದು ದಶಕಗಳಿಂದ ಬರೆಯುತ್ತ ಬಂದಿದ್ದೇನೆ.

ಬರೆದದ್ದು ಹತ್ತಾದರೆ/ ಬರೆಯಲಾಗದ್ದು ಸಾವಿರ

ಹೆಕ್ಕಿದ್ದು ಮುತ್ತಾದರೆ/ ಉಳಿದದ್ದು ಸಾಗರ!

(ಲೇಖಕರು ಖ್ಯಾತ ಕವಿ, ಹಾಸ್ಯ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net