ಸರ್ಕಾರ ರೈತರಿಗೆ ಶೇಕಡಾ 90ರಷ್ಟು ಸಹಾಯಧನ ನೀಡದಿದ್ದರೆ! ಪ್ರತಿಭಟನೆ ನಡೆಸುವುದಾಗಿ ಎಎಪಿ ಪಕ್ಷ ಎಚ್ಚರಿಕೆ.

chandru
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ತಮ್ಮ ಪ್ರಣಾಳಿಕೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ಶೇ. 90ರಷ್ಟು ಸಹಾಯಧನ್ ನೀಡುವುದಾಗಿ ಘೋಷಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ಪ್ರಸ್ತುತ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಹಾಯಧನ ಹೆಚ್ಚಿಸುವ ಬದಲು ಶೇ. 75ರಿಂದ ಶೇ. 55ಕ್ಕೆ ಇಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರು ಜುಲೈ.17ರಂದು ಬುಧವಾರ ಸಿ.ಎಂ.ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಹಿಂದೆ 2023-24ನೇ ಸಾಲಿನಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರೈತರಿಗೆ ಶೇ. 75ರಷ್ಟು ಸಹಾಯಧನ ಸಿಗುತ್ತಿತ್ತು, ಆದರೆ ಪ್ರಸಕ್ತ ಸಾಲಿನಲ್ಲಿ ಶೇ. 55ರಷ್ಟು ಮಾತ್ರ ಸಹಾಯಧನ ನೀಡುವುದಾಗಿ ಇಲಾಖೆಗಳು ಸುತ್ತೋಲೆ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ನಿರ್ಧಾರದಿಂದ ಇದರಿಂದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಮೋಸ ಮಾಡುವ ಈ ಆದೇಶವನ್ನು ತಕ್ಷಣವೇ ಹಿಂಪಡೆದು, ರೈತರಿಗೆ ಸೇರಬೇಕಾದ ಶೇ. 90ರಷ್ಟು ಸಹಾಯಧನವನ್ನು ಒದಗಿಸಲು ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲವಾದರೆ ರೈತ ಸಂಘಟನೆಗಳೊಂದಿಗೆ ಸೇರಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪತ್ರದ ಮೂಲಕ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net