

ಹಿರೀಸಾವೆ: ಪಂಚಭೂತಗಳನ್ನು ಹೊಂದಿರುವ ಪರಿಸರದಲ್ಲಿ ಮಾತ್ರ ಸಕಲ ಜೀವರಾಶಿಗಳು ಆಶ್ರಯ ಪಡೆಯಲು ಸಾಧ್ಯ ಎಂದು ಆದಿಚುಂಚನಗಿರಿ ಶೃಂಗೇರಿ ಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.
ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ 123ನೇ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಜೀವರಾಶಿಗಳು ಬದುಕಲು ಪಂಚಭೂತಗಳು ಅತ್ಯವಶ್ಯಕ ಎಂದರು.
ಭೂಮಿಯ ಮೇಲೆ ನೀರು, ಬೆಳಕು ಹಾಗೂ ಗಾಳಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಡೀ ಭೂಮಂಡಲವೇ ನಾಶವಾಗಲಿದೆ. ಆದ್ದರಿಂದ ಪಂಚಭೂತಗಳಿಗೆ ಕೆಡಕು ಆಗದಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕೆರೆ-ಕಟ್ಟೆ ಹಾಗೂ ನದಿ ಸೇರಿದಂತೆ ಜಲಮೂಲಗಳಿಗೆ ಕಸ ಸುರಿಯುವುದು, ಗಿಡ-ಮರಗಳಿಗೆ ಸುಖಾಸುಮ್ಮನೆ ಬೆಂಕಿ ಹೊತ್ತಿಸುವುದು ಇಲ್ಲವೆ ಬುಡಕ್ಕೆ ಕೊಡಲಿ ಪೆಟ್ಟು ನೀಡುವುದು ಹಾಗೂ ಭೂತಾಯಿಯ ಒಡಲಿಗೆ ಹಾನಿಕಾರಕ ವಸ್ತುಗಳನ್ನು ಸೇರಿಸುವುದರಿಂದ ಜೀವರಾಶಿಗಳಿಗೆ ಮುಂದೊಂದು ದಿನ ದೊಡ್ಡ ಅಪಾಯವೇ ಕಾದಿದೆ ಎಂದು ಎಚ್ಚರಿಸಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಿಂದೆ ಪಂಚಭೂತಗಳನ್ನು ಉಳಿಸಿಕೊಳ್ಳಬೇಕೆಂದು 5 ಕೋಟಿ ಸಸಿಗಳನ್ನು ನೆಡುವ ಸಂಕಲ್ಪ ಮಾಡಿದ್ದು, ಅದರಂತೆಯೇ ಶ್ರೀ ಮಠವು ಪರಿಸರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಿಂದ ಕೃಷಿ ಚಟುವಟಿಕೆಯಲ್ಲಿ ಇನ್ನಿಲ್ಲದಂತೆ ರಸಗೊಬ್ಬರ, ಕಳೆನಾಶಕ ಹಾಗೂ ಇತರ ಔಷಧ ಸಿಂಪಡಿಸುತ್ತಿರುವ ಪರಿಣಾಮ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಇದರಿಂದ ನಾವು ಸೇವಿಸುವ ಆಹಾರದಲ್ಲಿ ವಿಷದ ಪ್ರಮಾಣ ಸಾಕಷ್ಟಿದೆ. ಹಿಂದೆ ನಮ್ಮ ಪೂರ್ವಿಕರು 100 ರಿಂದ 125 ವರ್ಷಗಳ ವರಗೆ ಬದುಕುತಿದ್ದರು. ಆದರೆ ಇಂದಿನವರ ಆಯಸ್ಸು 60ರ ಹಾಸುಪಾಸಿಗೆ ಬಂದು ನಿಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಮನುಷ್ಯ ತನ್ನ ದುರಾಸೆಯಿಂದ ಹೊರಬಂದು ನಿಸ್ವಾರ್ಥದ ಜೀವನ ಪ್ರಾರಂಭಿಸಿ ಧರ್ಮ ಕಾರ್ಯಗಳಲ್ಲಿ ತೊಡಗಿಕೊಂಡಲ್ಲಿ ದೇವರ ಪಾದದಲ್ಲಿ ಮುಕ್ತಿ ಸಿಗಲಿದೆ ಎಂದರು.
ಪ್ರಕೃತಿಯ ಮಡಿಲಲ್ಲಿ ಉಸಿರನ್ನು ಸಾಲವಾಗಿ ಪಡೆದು ಬಂದಿರುವ ನಾವು ಹಿಂದಿರುಗುವಾಗ ಅದರ ಸಾಲವನ್ನು ಮರುಪಾವತಿಸಿಯೇ ಪಯಣಿಸಬೇಕು. ಆದರೆ ಈ ನಡುವೆ ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ತಿಳಿಸಿದರು.
18 ಜನ ಆಶಾ ಕಾರ್ಯಕರ್ತೆಯರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಗುಂಗರುಮಳೆ ಗ್ರಾಮಸ್ಥರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ಎನ್.ಆರ್.ರತ್ನರಾಜ್, ಸದಸ್ಯ ಶ್ರೀಕಂಠು, ಗುಡಿಗೌಡ ಪ್ರಕಾಶ್, ಪ್ರಮುಖರಾದ ಗಣೇಶ್‌ಗೌಡ, ನಂದೀಶ್, ಬೋರೇಗೌಡ ಇತರರು ಇದ್ದರು.