ಶಿಕ್ಷಣ, ಆರೋಗ್ಯ ಕ್ಷೇತ್ರ ಉತ್ತಮವಾಗಿದ್ದರೆ ದೇಶದ ಪ್ರಗತಿ

08 KRN-1
ಕೆ.ಆರ್.ನಗರದ ಡಾ.ರಾಜಕುಮಾರ್ ಬಾನಂಗಳದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಶಾಸಕ ಡಿ.ರವಿಶಂಕರ್ ಸನ್ಮಾನಿಸಿದರು. ಎಸ್.ಟಿ.ಜವರೇಗೌಡ, ಜಿ.ಸುರೇಂದ್ರಮೂರ್ತಿ, ರುಕಿಯಾ ಬೇಗಂ, ವಿ.ಪಿ.ಕುಲದೀಪ್, ರವಿಕುಮಾರ್, ಆರ್.ಕೃಷ್ಣಪ್ಪ, ಕೆ.ಎಸ್.ಮಹೇಶ್, ಶಿವುನಾಯಕ್, ಪಲ್ಲವಿ ಆನಂದ್ ಇನ್ನಿತರರು ಇದ್ದರು.
Published on

ಕೆ.ಆರ್.ನಗರ : ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಅಭಿವೃದ್ಧಿಯಾದಾಗ ಮಾತ್ರ ಆ ದೇಶ ಅಭಿವೃದ್ಧಿ ಕಾಣಲಿದೆ. ಶಿಕ್ಷಕರು ಸ್ವಾರ್ಥವಿಲ್ಲದೆ ಕೆಲಸ ಮಾಡಿದರೆ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಶಿಕ್ಷಕರು ಮತ್ತು ಮಕ್ಕಳ ಕಲ್ಯಾಣ ನಿಧಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರು ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ದೇವರ ಸಮಾನ. ಗುರುಗಳಲ್ಲೇ ನಾವು ದೇವರನ್ನು ಕಾಣುತ್ತೇವೆ. ಆದ್ದರಿಂದ ನೀವು ನಿರ್ವಹಿಸುವ ಕೆಲಸದಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಮತ್ತು ಜವಾಬ್ದಾರಿಯಿಂದ ನಡೆದುಕೊಂಡರೆ ನೀವು ಸಮಾಜಕ್ಕೆ ಮಾದರಿ ಆಗುತ್ತೀರಿ. ಗೌರವ ಸ್ಥಾನದಲ್ಲಿರುವ ನೀವು ಉತ್ತಮ ವಿದ್ಯಾರ್ಥಿಗಳನ್ನು ತಯಾರಿಸಿ ಸಮಾಜದಲ್ಲಿ ಶಿಕ್ಷಕ ವೃತ್ತಿ ಗೌರವ ಕಾಪಾಡಿ ದೇಶ ಪ್ರೇಮ ಮೆರೆಯಿರಿ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಶಿಕ್ಷಣ ಕ್ಷೇತ್ರ ರಾಜಕೀಯ ಕ್ಷೇತ್ರ ಅಲ್ಲ. ಅದು ಶ್ರೇಷ್ಠ ಮತ್ತು ಬದುಕಿನ ಇಲಾಖೆ. ಪ್ರತಿಯೊಬ್ಬ ಶಿಕ್ಷಕರು ಅದನ್ನು ಅರಿತು ನಡೆದುಕೊಳ್ಳಬೇಕು. ಸಂಘಟನೆಗಳ ಮೂಲ ಉದ್ದೇಶ ಈಡೇರಬೇಕಾದರೆ ನಿಮ್ಮ ವೈಯಕ್ತಿಕ ಕೆಲಸಕ್ಕೆ ಸಂಘಟನೆಗಳನ್ನು ಬಳಸಿಕೊಳ್ಳಬೇಡಿ. ಶಿಕ್ಷಕರು ಮಕ್ಕಳಿಗೆ ಪುಸ್ತಕದ ಜತೆಗೆ ಸಾಮಾನ್ಯ ಜ್ಞಾನ ಕಲಿಸಿ ಎಂದು ಹೇಳಿದರು.

ಅಕ್ಷರ ಮತ್ತು ಆರೋಗ್ಯದ ಕೊರತೆ ಇರುವ ದೇಶ ಉದ್ಧಾರವಾಗುವುದಿಲ್ಲ. ಶಿಕ್ಷಣದ ಶಕ್ತಿ ಅಪಾರವಾಗಿದ್ದು ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳನ್ನು ಸರ್ಕಾರ ಕಡೆಗಣಿಸಬಾರದು. ಕಲಿತ ಶಾಲೆ ಹೆತ್ತ ತಾಯಿ ಇದ್ದಂತೆ, ಯಾರು ಕೂಡ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದವರು, ನಿವೃತ್ತ ಶಿಕ್ಷಕರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ವೇದಿಕೆಯಲ್ಲಿ ಡಿಡಿಪಿಐ ಎಸ್.ಟಿ.ಜವರೇಗೌಡ, ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕಿಯಾ ಬೇಗಂ, ತಾಪಂ ಇಒ ಗಳಾದ ವಿ.ಪಿ.ಕುಲದೀಪ್, ರವಿಕುಮಾರ್, ಬಿಇಒ ಆರ್.ಕೃಷ್ಣಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭಾ ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ಪಲ್ಲವಿ ಆನಂದ್, ಸದಸ್ಯ ನಟರಾಜ್, ಮುಖ್ಯಾಧಿಕಾರಿ ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಸಿಐ ಎಸ್.ಶಿವಪ್ರಕಾಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಸ್ವಾಮಿ, ಪ್ರಾಥಮಿಕ ಶಾಲಾ ಬಡ್ತಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಯ್ಯದ್ ರಿಜ್ವಾನ್, ಮುಖಂಡರಾದ ಜಾಬೀರ್, ಮಧುವನಹಳ್ಳಿ ಆದರ್ಶ, ವಿನಯ್, ಸೇರಿದಂತೆ ಇನ್ನಿತರರು ಇದ್ದರು.

ಜವಾಬ್ದಾರಿ ಮರೆತ ಶಿಕ್ಷಕರು

ಶಿಕ್ಷರ ದಿನಾಚರಣೆ ಕಾರ್ಯಕ್ರಮ ಪ್ರಾರಂಭವಾಗಿ ಅರ್ಧ ತಾಸಿಗೆ ಕಾರ್ಯಕ್ರಮದಲ್ಲಿದ್ದ ಶಿಕ್ಷಕರು ಶ್ರೀಕೃಷ್ಣ ಮಂದಿರದಲ್ಲಿ ಆಯೋಜಿಸಿದ್ದ ಊಟಕ್ಕೆ ಹೊರಟರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಊಟಕ್ಕಾಗಿ ಹೊರನಡೆದು ಸಭಾ ಕಾರ್ಯಕ್ರಮದಲ್ಲಿ ಅಶಿಸ್ತು ಪ್ರದರ್ಶಿಸಿದರು. ಶಾಸಕ ಡಿ.ರವಿಶಂಕರ್ ಭಾಷಣದ ಹೊತ್ತಿಗೆ ವೇದಿಕೆ ಮುಂಭಾಗದ ಶೇ 99 ರಷ್ಟು ಕುರ್ಚಿಗಳು ಖಾಲಿಯಾಗಿದ್ದವು. ಆದರೂ ಶಾಸಕರು ನಗುಮುಖದಿಂದಲೇ ಕಾರ್ಯಕ್ರಮದ ಅಂತಿಮ ಘಟ್ಟದವರೆಗು ಇದ್ದು ತಮ್ಮ ಗೌರವ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net