

ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ|
ಸಾಕೆನದೆ ಬೇಕೆನದೆ ನೋಡು ನೀನದನು||
ತಾಕಿಸದಿರಂತರಾತ್ಮಂಗಾವಿಚಿತ್ರವನು|
ಹಾಕು ವೇಷವ ನೀನು-ಮಂಕುತಿಮ್ಮ||751||
ಲೋಕವೆಲ್ಲವೂ ವಿಚಿತ್ರ, ಇಂದ್ರಜಾಲದ ಕೃತ್ಯ. ಸಾಕು ಎನ್ನದೆ, ಬೇಕು ಎನ್ನದೆ ನೀನು ಅದನ್ನು ನೋಡು. ನಿನ್ನ ಅಂತರಾತ್ಮಕ್ಕೆ ಆ ವಿಚಿತ್ರವನ್ನು ತಾಕಿಸಬೇಡ. ನೀನೂ ಅದರಲ್ಲಿ ವೇಷವನ್ನು ಹಾಕು ಎನ್ನುತ್ತದೆ ಈ ಕಗ್ಗ.
ಹಲವಾರು ವಿಸ್ಮಯ, ಅಮಿತ ಸೌಂದರ್ಯ,ವಿಚಿತ್ರ ಮತ್ತು ಅನಂತ ರಹಸ್ಯಗಳಿಂದ ಕೂಡಿರುವ ಲೋಕವಿದು. ಬೇಲಿಯಲ್ಲರಳಿದ ಪುಟ್ಟ ಹೂವಿನಿಂದ ತೊಡಗಿ ನಿಸರ್ಗದಲ್ಲಿರುವ ಎಲ್ಲದರಲ್ಲೂ ಅದ್ಭುತವಾದ ಸೌಂದರ್ಯವಿದೆ. ಸುರಿವ ಮಳೆ, ಹರಿವ ಹೊಳೆ, ಚಿಮ್ಮುವ ಸಾಗರದಲೆ, ಆವಿಯಾಗಿ ಮೋಡವಾಗುವ ಲೀಲೆ ಮತ್ತೆ ಇಳೆಗವತರಿಸುವ ಮಳೆ. ಇಂಥ ಹಲವು ಸಂಯೋಜನೆಗಳು ಪ್ರಕೃತಿಯನ್ನು ಸಮನ್ವಯದಿಂದ ಇರುವಂತೆ ಕಾಪಾಡುತ್ತಿವೆ. ಸೃಷ್ಟಿಯ ಈ ವಿಚಿತ್ರವನ್ನು ಅರ್ಥೈಸಿಕೊಳ್ಳುವುದು ಸುಲಭವಲ್ಲ.
ಮನುಷ್ಯನ ಹಲವು ನೂತನ ಆವಿಷ್ಕಾರಗಳಿಗೂ ಪ್ರಕೃತಿಯಲ್ಲಿರುವ ಇಂಥ ಅಚ್ಚರಿಗಳೇ ಮೂಲ ಪ್ರೇರಣೆ. ಪ್ರಕೃತಿಯನ್ನುಳಿದು ಮನುಜನ ಯಾವ ಸಾಧನೆಯೂ ಸಾಧ್ಯವಿಲ್ಲ. ಇಂದ್ರಜಾಲದಂತೆ ನಿಸರ್ಗದಲ್ಲಿ ನಡೆಯುವ ಈ ಕ್ರಿಯೆಗಳ ಹಿಂದೆ ಇರುವ ಮಾಯಾವಿ ಯಾರು? ಈ ರಹಸ್ಯಾತಿರಹಸ್ಯವನ್ನು ಅರಿಯುವುದು ಹೇಗೆ? ಇಂದ್ರಜಾಲವೆನ್ನುವುದು ಕಣ್ಕಟ್ಟಿನ ವಿದ್ಯೆ. ಇದು ಸೃಷ್ಟಿಸುವ ಮಾಯಾಲೋಕದಲ್ಲಿ ಕಣ್ಣೆದುರು, ಕೈಯೊಳಗೆಯೇ ಇದ್ದದ್ದು ಮರುಕ್ಷಣವೇ ಇಲ್ಲವಾಗುತ್ತದೆ. ಇದ್ದದ್ದೇ ಸುಳ್ಳೇನೋ ಎಂದು ಕಣ್ಣು, ಕಿವಿಗಳನ್ನೇ ನಂಬದಂಥ ಸ್ಥಿತಿ. ಅಷ್ಟೇ ಅಲ್ಲ ಅದುವರೆಗೂ ಇಲ್ಲದೆ ಇದ್ದದ್ದು ಇದ್ದಕ್ಕಿದ್ದಂತೆಯೇ ಗೋಚರವಾಗುತ್ತದೆ. ಬಣ್ಣ ಬದಲಾಯಿಸುವ, ಹಣ-ಒಡವೆಗಳನ್ನು ದ್ವಿಗುಣಗೊಳಿಸುವ ರೋಚಕ ಅನುಭವಗಳನ್ನು ಪಡೆಯುತ್ತ ಪ್ರೇಕ್ಷಕರು ಮೈಮರೆಯುತ್ತಾರೆ. ಆಶ್ಚರ್ಯ, ಆತಂಕ, ಆನಂದವೇ ಮೊದಲಾದ ಭಾವಗಳಲ್ಲಿ ಸಮಯವನ್ನು ಕಳೆದುಬಿಡುತ್ತಾರೆ.
ಮನುಷ್ಯ ಜೀವನವೂ ಒಂದು ಇಂದ್ರಜಾಲವೇ ತಾನೆ? ಈಗಿದ್ದವರು ಇನ್ನೊಂದು ಕ್ಷಣಕ್ಕೆ ಇಲ್ಲವಾಗುತ್ತಾರೆ. ನಿನ್ನೆಯವರೆಗೆ ಇರದೆ ಇದ್ದ ಜೀವವು ಇಂದು ಕಾಣಿಸಿಕೊಳ್ಳುತ್ತದೆ. ಬರಡು ನೆಲವೆಂದು ಬಗೆದಿದ್ದ ಬಯಲಿನಲ್ಲಿ ಮೊದಲ ಮಳೆಗೆ ಹಸಿರು ಕಣ್ತೆರೆಯುತ್ತದೆ. ಯಾವುದೋ ಮರದ ಬೀಜವು ಇನ್ನೆಲ್ಲೋ, ಹೇಗೋ ಬಿದ್ದು ಚಿಗುರಿ ಮರವಾಗುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಕೃತ್ಯವೂ ಇಂದ್ರಜಾಲದಂತೆಯೇ ಮನುಷ್ಯನನ್ನು ಮಂತ್ರಮುಗ್ಧಗೊಳಿಸುತ್ತದೆ. ಇಷ್ಟೇ ಅಲ್ಲ ಮನುಷ್ಯನ ಶರೀರ, ಅಲ್ಲಿ ನಡೆಯುವ ಚಟುವಟಿಕೆಗಳು, ವ್ಯವಸ್ಥಿತ ರಚನೆಯ ಕೌಶಲ್ಯವೆಲ್ಲವೂ ಒಂದು ಲೀಲೆಯೇ ತಾನೆ?
ವಿವೇಕವನ್ನು ವರವಾಗಿ ಪಡೆದು ಬಂದಿರುವ ಮನುಷ್ಯನು ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರಗಳಿಂದ ಕೂಡಿದ ಮಾಯೆಯೊಳಗೆ ಸಿಲುಕುತ್ತಾನೆ. ಹಾಗಾಗಿ ಜೀವನದುದ್ದಕ್ಕೂ ಅವೆಷ್ಟೋ ಅನಿರೀಕ್ಷಿತಗಳನ್ನು, ಊಹಾತೀತ ಅನುಭವಗಳನ್ನು ಎದುರಿಸುತ್ತಾನೆ. ಸಂಸಾರದ ಮೋಹಜಾಲಕ್ಕೆ ಸಿಲುಕಿ ಹೈರಾಣಾಗುತ್ತಾನೆ. ನೋವು-ನಲಿವು, ಏಳು-ಬೀಳುಗಳ ಪಯಣದಲ್ಲಿ ಖಿನ್ನನಾಗುವುದು, ದುಃಖಿಸುವುದು, ಬೀಗುವುದು, ಮೆರೆಯುವುದು ಸ್ವಾಭಾವಿಕವೇ ಆಗಿದೆ. ಆದರೆ ಇವೆಲ್ಲವೂ ಇಂದ್ರಜಾಲದಂತೆಯೇ ಒಂದು ಮಾಯಾಲೋಕವಲ್ಲವೇ? ಲೌಕಿಕದಲ್ಲಿ ಮುಳುಗೇಳುತ್ತಾ ತನುಸುಖವೇ ಬದುಕಿನ ಗುರಿ ಎಂದು ಭಾವಿಸಿದವರು ಕಷ್ಟ-ನಷ್ಟಗಳಿಗೆ ಸಾಕೋಸಾಕು ಎಂದು ಬೊಬ್ಬಿರಿಯುತ್ತಾರೆ. ಪಡೆದ ಇಂದ್ರಿಯ ಸುಖಗಳಿಗೆ ಮಾರು ಹೋಗಿ ಇನ್ನಷ್ಟು ಬೇಕು ಎಂದು ಚಡಪಡಿಸುತ್ತಾರೆ. ಭ್ರಮಿತರಂತೆ ಬದುಕುತ್ತಾರೆ.
ಯಾರಲ್ಲಿ ಆತ್ಮಪ್ರಜ್ಞೆಯು ಜಾಗ್ರತವಾಗಿರುತ್ತದೋ ಅವನನ್ನು ಲೋಕದ ವ್ಯಾಪಾರವು ವಿಚಲಿತಗೊಳಿಸುವುದಿಲ್ಲ. ಯಾವುದಕ್ಕೂ ಸಾಕು ಎನ್ನದೆ, ಸೋತೆನೆಂದು ರೋದಿಸದೆ, ಸುಖಾನುಭವಗಳು ಇನ್ನೂ ಬೇಕು ಎಂದು ಬಯಸದೆ ಆತ್ಮಜ್ಞಾನದಿಂದ ಬಾಳುತ್ತಾನೆ. ಇಂದ್ರಜಾಲದಂತೆ ನಡೆಯುವ ಜೀವನದ ವೈಚಿತ್ರ್ಯಗಳಿಗೆ ಸಾಕ್ಷಿಯಾಗುತ್ತಾನೆ. ಪರಮಾತ್ಮನೆಂಬ ಜಾದುಗಾರನು ನಡೆಸುವ ಮಾಯದಾಟದಲ್ಲಿ ಅವನೇ ಹಾಕಿ ಕಳುಹಿದ ವೇಷವನ್ನು ಧರಿಸಿ ಲೋಕದ ರಂಗದಲ್ಲಿ ನಟಿಸುತ್ತಾನೆ. ನಟನು ತನಗಿತ್ತ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ವೇಷ ಕಳಚಿದ ಮೇಲೆ ತಾನೇ ಆಗಿರುತ್ತಾನೆ.
ಅಂತೆಯೇ ಜೀವಾತ್ಮವು ಸಂಸಾರದಲ್ಲಿ, ಉದ್ಯೋಗ ಕ್ಷೇತ್ರದಲ್ಲಿ, ಸಾಮಾಜಿಕವಾಗಿ ಹಲವು ವೇಷವನ್ನು ಧರಿಸಿ ಕರ್ತವ್ಯಗಳನ್ನು ನಿಭಾಯಿಸುತ್ತದೆ. ಅವಧಿ ಮುಗಿದಾಗ ವೇಷವನ್ನು ಕಳಚಿ ಲೋಕವೆಂಬ ರಂಗದಿಂದ ನಿರ್ಗಮಿಸುತ್ತದೆ. ಅದರ ಕಾರ್ಯಕ್ಷಮತೆಗೆ ಅನುಸಾರವಾಗಿ ಗಾರುಡಿಗನು ಇನ್ನೊಂದು ವೇಷವನ್ನು ತೊಡಿಸಿ, ಮತ್ತೊಂದು ಕಾರ್ಯಕ್ಷೇತ್ರಕ್ಕೆ ಇಳಿಸುತ್ತಾನೆ. ಈ ನಿಜದ ಅರಿವು ಅರಳಿದವನು ಲೋಕದೊಳಗೆ ಬೆರೆತರೂ ಬೇರೆಯಾಗಿ ಉಳಿಯುತ್ತಾನೆ. ಗಾರುಡಿಗನೇ ನಡೆಸುತ್ತಿದ್ದಾನೆ ಎಂಬ ನಂಬಿಕೆಯು ಅಚಲವಾಗಿರುವುದರಿಂದಾಗಿ ಪ್ರತಿಕೂಲ ಸಂದರ್ಭಗಳಲ್ಲಿ ಸಮಚಿತ್ತದಿಂದ ಇರುತ್ತಾನೆ. ಆತ್ಮೋನ್ನತಿಗಾಗಿ ಪ್ರಯತ್ನಿಸುತ್ತಾ ಲೋಕದ ಹಿತಕ್ಕಾಗಿಯೂ ಶ್ರಮಿಸುತ್ತಾನೆ.