

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಗುಂಪುಗಾರಿಕೆಗೆ ಪಕ್ಷದ ವರಿಷ್ಠರು ಮದ್ದು ಅರಿಯಲೇಬೇಕು. ಶಿಸ್ತು, ಬಿಗಿ ಮಾಡದಿದ್ದರೆ ಸಂಘಟನಾ ಪರ್ವ, ವಿವಿಧ ಸಮಿತಿಗಳಿಂದ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕ ಬಿಜೆಪಿ ಬಗ್ಗೆ ಕೇಂದ್ರದ ನಾಯಕರು ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತಿನ ಗುಂಡು ಸಿಡಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮವಹಿಸುವಂತೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಶಿಾರಸು ಮಾಡಿದೆ. ಆದರೆ ಪಕ್ಷದ ವರಿಷ್ಠರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಶಿಸ್ತು ಸಮಿತಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ನೋಟಿಸ್ ಕೊಟ್ಟರು. ಮುಂದಿನ ಪ್ರಕ್ರಿಯೆ ಆಗಲೇ ಇಲ್ಲ. ಕರ್ನಾಟಕ ಬಿಜೆಪಿ ಬಗ್ಗೆ ಕೇಂದ್ರ ನಾಯಕರಿಗೆ ಅಭಿಪ್ರಾಯ ಏನಿದೆ ಗೊತ್ತಾಗಬೇಕಾಗಿದೆ ಎಂದರು.
ಹಿಂದೆಲ್ಲ ರಾಜ್ಯ ಕೋರ್ ಕಮಿಟಿ ಸಭೆಗಳು ತೇಪೆ ಹಾಕುವುದಕ್ಕೆ ಸೀಮಿತವಾಗಿದ್ದವು. ಮೊದಲ ಬಾರಿಗೆ ಕೆಲವು ದಿನಗಳ ಹಿಂದೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೈಚಳಿ ಬಿಟ್ಟು ಆಂತರಿಕ ವಿಷಯಗಳನ್ನೆಲ್ಲ ಚರ್ಚಿಸಲಾಗಿದೆ.
ಶಾಸಕರಿಬ್ಬರ ವಿರುದ್ಧ ಕ್ರಮ ವಿಳಂಬ, ಯತ್ನಾಳ್‌ಗೆ ನೋಟಿಸ್ ನೀಡಿದ್ದೇ ಬಂತು ಮುಂದಿನ ಪ್ರಕ್ರಿಯೆಯಾಗಲಿಲ್ಲ. ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮುಕ್ತವಾಗಲು ಸುನಿಲ್ ಕುಮಾರ್ ಬಯಸಿದ್ದು, ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಯಿದೆ.
ಗೊಂದಲ, ವಿಳಂಬವೇಕೆ ? ಈ ಬೆಳವಣಿಗೆಗಳೆಲ್ಲ ಏಕೆ ಎನ್ನುವುದಕ್ಕೆ ವರಿಷ್ಠರೇ ಹೇಳಬೇಕು. ಕರ್ನಾಟಕದ ಬಗ್ಗೆ ಅಭಿಪ್ರಾಯ ಏನಿದೆ ? ಎಂಬುದನ್ನು ತಿಳಿಸಬೇಕೆಂದೂ ಕೋರ್ ಕಮಿಟಿ ಸಭೆ ಚರ್ಚಿಸಿದೆ.
ಕೋರ್ ಕಮಿಟಿ ಬಲಿಷ್ಠವಾದರೆ ಗುಂಪುಗಾರಿಕೆ ನಿಲ್ಲಬಹುದು. ಈ ಸಭೆಯ ನಿರ್ಣಯಗಳನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ಚರ್ಚಿಸಲಾಗಿದೆ. ಅಲ್ಲದೆ, ಕೋರ್ ಕಮಿಟಿ ಸಭೆ ನಿರ್ದೇಶನದಂತೆ ಆಯ್ದ ಹಿರಿಯರು ಸಭೆ ಸೇರಿದ್ದೂ ನಿಜವೆಂದು ಡಿ.ವಿ.ಸದಾನಂದಗೌಡ ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ವರಿಷ್ಠರು ನೇಮಿಸಿದ್ದಾರೆ. ಅದು, ಹಂಗಾಮಿ ವ್ಯವಸ್ಥೆಯಾಗಿತ್ತು. ಈಗ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಮತ ಮೂಡದಿದ್ದರೆ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಸಂವಿಧಾನಬದ್ಧವಾಗಿ ಈ ಚುನಾವಣೆ ನಡೆಯಲಿದೆ. ಹಾಲಿ ರಾಜ್ಯಾಧ್ಯಕ್ಷ ಜವಾಬ್ದಾರಿ ನಿರ್ವಹಣೆ ಸಂದರ್ಭದಲ್ಲಿ ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪಾರದರ್ಶಕ, ಸರ್ವಸಮ್ಮತದಿಂದ ಹೊಸ ಅಧ್ಯಕ್ಷ ನೇಮಕವಾದರೆ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.