

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರವೂ ಆರೋಪಿಯನ್ನು ಬಂಧನದಲ್ಲಿಟ್ಟು ವಿಚಾರಣೆ ಮುಂದುವರಿಸುವುದು ವಿಚಾರಣಾ ಪೂರ್ವ ಶಿಕ್ಷೆ ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿಕ್ಕಮಗಳೂರಿನ ಆರೋಪಿ ಎಂ.ಬಿ.ಸಂತೋಷ್ ಎಂಬುವವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ ಅರ್ಜಿದಾರನಿಗೆ ಷರತ್ತುಬದ್ಧ ಮಂಜೂರು ಮಾಡಿದೆ.
ಪ್ರಕರಣದಲ್ಲಿ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್‌ನ ಮೊದಲರೆಡು ಸಾಕ್ಷಿಗಳನ್ನು ಈಗಾಗಲೆ ತನಿಖೆಗೊಳಪಡಿಸಲಾಗಿದೆ. ಪ್ರತ್ಯಕ್ಷದರ್ಶಿಯಾದ ಎರಡನೇ ಸಾಕ್ಷಿಯು (ಆರೋಪಿಯ ತಾಯಿ) ತನಿಖಾಧಿಕಾರಿ ಮತ್ತು ವಿಚಾರಣಾ ನ್ಯಾಯಾಲಯ ಹೇಳಿಕೆ ದಾಖಲಿಸಿದ್ದಾರೆ. ಈ ಎರಡು ಸಂದರ್ಭದಲ್ಲಿ ವಿಭಿನ್ನವಾಗಿ ಹೇಳಿಕೆ ನೀಡಿದ್ದಾರೆ.
ಈ ಸಾಕ್ಷಿಯ ಹೊರತಾಗಿ ಪ್ರತ್ಯಕ್ಷದರ್ಶಿ ಇಲ್ಲ. ಇಂತಹ ಸಂದರ್ಭದಲ್ಲಿ ಗಂಭೀರ ಅಪರಾಧಗಳ ಆರೋಪವಿದ್ದರೂ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವುದಕ್ಕೆ ಯಾವುದೇ ತರನಾದ ಸೂಕ್ತ ಕಾರಣಗಳು ಕಂಡು ಬರುತ್ತಿಲ್ಲ. ಆತನನ್ನು ಬಂಧನದಲ್ಲಿ ಮುಂದುವರಿಸುವುದು ವಿಚಾರಣಾ ಪೂರ್ವ ಶಿಕ್ಷೆ ಎನಿಸಿಕೊಳ್ಳುತ್ತದೆ. ಹಾಗಾಗಿ, ಷರತ್ತುಗಳೊಂದಿಗೆ ಜಾಮೀನು ಪಡೆಯಲು ಆರೋಪಿ ಅರ್ಹನಾಗಿದ್ದಾನೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.